ಜಪಾನೀ ಶಿಕ್ಷಣ ಪದ್ಧತಿ -
ಜರ್ಮನಿಯಂತೆ ಜಪಾನೂ ದ್ವಿತೀಯ ಮಹಾಯುದ್ಧದ ಅನಂತರ ಬಹುಬೇಗ ಚೇತರಿಸಿಕೊಂಡು ಇಂದು ಔದ್ಯೋಗಿಕ ಪ್ರಗತಿಯ ಮುಂಚೂಣಿ ರಾಷ್ಟ್ರಗಳಲ್ಲೊಂದಾಗಿದೆ. ಔದ್ಯೋಗಿಕ ಪ್ರಗತಿಗೂ ಆ ಮೂಲಕ ರಾಷ್ಟ್ರದ ಆರ್ಥಿಕಾಭಿವೃದ್ಧಿಗೂ ನೆರವಾಗುವಂಥ ಶಿಕ್ಷಣ ವ್ಯವಸ್ಥೆ ಇವೆರಡು ದೇಶಗಳಲ್ಲೂ ಏರ್ಪಟ್ಟಿದೆ. ಯೂರೋಪಿನಲ್ಲಿ ಕಡ್ಡಾಯ ಶಿಕ್ಷಣವನ್ನು ಜರ್ಮನಿ ಮೊದಲು ಆಚರಣೆಗೆ ತಂದಂತೆ ಏಷ್ಯದಲ್ಲಿ ಜಪಾನು ಮೊದಲು ಆಚರಣೆಗೆ ತಂದು ಇತರ ಪೌರಸ್ತ್ಯ ದೇಶಗಳಿಗೆ ಮೇಲ್ಪಂಕ್ತಿಯಾಯಿತು. ಜೊತೆಗೆ, ಜಪಾನು ಅಕ್ಷರಸ್ಥರ ಪ್ರಮಾಣದಲ್ಲಿ ಪ್ರಪಂಚದಲ್ಲೆ ಅಗ್ರಸ್ಥಾನ ಪಡೆದಿದೆ. ಈ ಎಲ್ಲ ಕಾರಣಗಳಿಂದ ಅಲ್ಲಿನ ಶಿಕ್ಷಣ ಪದ್ಧತಿ ಕುತೂಹಲಕಾರಿಯೆನಿಸುತ್ತದೆ.

ಪ್ರಾಚೀನ ಜಪಾನಿನಲ್ಲಿ ಶಿಕ್ಷಣ : ಅಂಥ ವೈಶಿಷ್ಟ್ಯಪೂರ್ಣವೆನ್ನಬಹುದಾದ ಪ್ರಾಚೀನ ಶಿಕ್ಷಣ ಪದ್ಧತಿಯೊಂದು ಜಪಾನಿನಲ್ಲಿ ಇರದಿದ್ದರೂ ಅದು ಅಂದು ಚೀನದಲ್ಲಿದ್ದ ಶಿಕ್ಷಣ ಪದ್ಧತಿಯನ್ನು ಸ್ವಾಗತಿಸಿ, ತನ್ನ ಅಗತ್ಯಕ್ಕನುಗುಣವಾಗಿ ಮಾರ್ಪಡಿಸಿ, ತನ್ನದೇ ಆದ ಪದ್ಧತಿಯನ್ನು ಕ್ರಮಕ್ರಮವಾಗಿ ರೂಪಿಸಿಕೊಂಡಿತು. ಮೊದಮೊದಲು ಚೀನದ ಸಾಹಿತ್ಯ. ಸಂಸ್ಕøತಿಗಳನ್ನೇ ಅವರು ಅಧ್ಯಯನ ಮಾಡುತ್ತಿದ್ದರು. ಚೀನ ಮತ್ತು ಕೊರಿಯದ ಕಲಾವಿದರು, ಪುರೋಹಿತರು ಮತ್ತು ಲೇಖಕರು ಜಪಾನಿನಲ್ಲಿ ಆಡಳಿತ, ಮತಧರ್ಮ, ಬರೆವಣಿಗೆಯ ಕಲೆ ಮುಂತಾದ ಅಂಶಗಳ ಮೇಲೆ ಹೊಸ ಭಾವನೆಗಳನ್ನು ಹರಡಿದರು. ಬರೆವಣಿಗೆಯ ಪರಿಚಯದಿಂದ ಅಲ್ಲಿನ ಬುದ್ಧಿಜೀವಿಗಳ ಮೇಲೆ ಮಹತ್ತರ ಪರಿಣಾಮವಾಯಿತು. ಅದು ತನಕ ಜ್ಞಾನವನ್ನು ಒಬ್ಬರಿಂದೊಬ್ಬರು ಕಲಿತು ಸಂರಕ್ಷಿಸಬೇಕಾಗಿತ್ತು. ಈಗ ಬರೆವಣಿಗೆಯ ಮೂಲಕ ಅದನ್ನು ಸಂರಕ್ಷಿಸುವುದಕ್ಕೂ ಅಭಿವೃದ್ಧಿಪಡಿಸುವುದಕ್ಕೂ ಸಾಧ್ಯವಾಯಿತು. ಚೀನದಿಂದ ಎಂದು ಅವರು ಬರೆವಣಿಗೆಯನ್ನು ಕಲಿತರೆಂದು ನಿರ್ದಿಷ್ಟವಾಗಿ ಹೇಳುವುದು ಸಾಧ್ಯವಿಲ್ಲವಾದರೂ ಕ್ರಿ.ಶ. 400ರ ಸುಮಾರಿಗೆ ಅವರಿಗೆ ಅದು ಪರಿಚಯವಾಗಿದ್ದಿರಬೇಕು. ಕೊರಿಯದ ಬರೆಹಗಾರರು ಇಲ್ಲಿ ಸಾಮ್ರಾಜ್ಯದ ದಾಖಲೆಗಳನ್ನು ಚೀನೀ ಭಾವಲಿಪಿಗಳಲ್ಲಿ ಬರೆದಿಟ್ಟಿರುವುದು ಕಂಡುಬಂದಿರುವುದೇ ಇದಕ್ಕೆ ಆಧಾರ. ಬರೆಯುವ ಕಲೆ ಕೈಗೂಡಿದಂತೆ ಜಪಾನಿನ ಶಿಕ್ಷಣ ಹಲವಾರು ಮೂಲಗಳಿಂದ ಪ್ರಭಾವಿತವಾಗಿ ವಿವಿಧ ರೀತಿಯಲ್ಲಿ ಬೆಳೆಯಲಾರಂಭಿಸಿತು. ಅಲ್ಲಿನ ವಿದ್ಯಾರ್ಥಿಗಳು ಚೀನಕ್ಕೆ ಹೋಗಿ ಶಿಕ್ಷಣ ಪಡೆದು ಬರುತ್ತಿದ್ದರು; ಚೀನ ಮತ್ತು ಏಷ್ಯದ ಇತರ ದೇಶಗಳಿಂದ ಅಧ್ಯಾಪಕರೂ ಪುರೋಹಿತರೂ ಬಂದು ಶಿಕ್ಷಣ, ಧರ್ಮ, ಸಂಸ್ಕøತಿಗಳನ್ನು ಪ್ರಚಾರ ಮಾಡಿ ಹೋಗುತ್ತಿದ್ದರು. ಇವೆಲ್ಲದರ ಫಲವಾಗಿ ಕ್ರಿ..ಶ. 7ನೆಯ ಶತಮಾನದ ವೇಳಗೆ ನಾರಾ-ಕೀಓಟ ಕ್ಷೇತ್ರದಲ್ಲಿ ಒಂದು ರೀತಿಯ ಉನ್ನತ ಶಿಕ್ಷಣ ಪದ್ಧತಿ ರೂಪುಗೊಂಡಿತು. ಚೀನೀಯರ ಪ್ರಾಚೀನ ಮಹಾಕೃತಿಗಳ ಅಧ್ಯಯನ, ಚೀನೀ ಲಿಪಿಯ ಬಳಕೆ, ನ್ಯಾಯಶಾಸ್ತ್ರ, ಅಂಕಗಣಿತ ಮುಂತಾದ ಅಂಶಗಳು ಅಲ್ಲಿ ಮಾನ್ಯತೆ ಪಡೆದುವು. ವೈದ್ಯಶಾಸ್ತ್ರ, ಪಂಚಾಂಗರಚನೆ, ದೇವತಾಶಾಸ್ತ್ರ ಮುಂತಾದವನ್ನು ಬೋಧಿಸುವ ತಾಂತ್ರಿಕ ಶಾಲೆಗಳು ಅಸ್ತಿತ್ವಕ್ಕೆ ಬಂದುವು. ಚೀನದಲ್ಲಿದ್ದಂತೆ ಇಲ್ಲಿಯೂ ಶಿಕ್ಷಣ ಶ್ರೀಮಂತವರ್ಗದವರ ಹಿತಾಸಕ್ತಿಗಳಿಗೆ ಅನುಗುಣವಾಗಿ ರೂಪುಗೊಳ್ಳುತ್ತ ಬಂತು. ಆದರೆ ಸಾರ್ವಜನಿಕ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆರಿಸಲು ಚೀನದಲ್ಲಿ ಅಂದು ಆಚರಣೆಯಲ್ಲಿದ್ದ ಪರೀಕ್ಷಾಪದ್ಧತಿಯನ್ನು ಇಲ್ಲಿ ಅಷ್ಟಾಗಿ ಪುರಸ್ಕರಿಸಲಿಲ್ಲ. ಆ ಕಾಲದಲ್ಲಿ ಅನೇಕ ಶ್ರೀಮಂತ ಕುಟುಂಬಗಳು ತಮ್ಮ ಮಕ್ಕಳಿಗೆ ಮನೆಯಲ್ಲೇ ಶಿಕ್ಷಣ ಸೌಲಭ್ಯಗಳನ್ನು ಕಲ್ಪಿಸಿಕೊಂಡು ತಮ್ಮ ನಾಡಿನಲ್ಲಿ ಶ್ರೀಮಂತಿಕೆಗೆ ಕಾರಣವೆನಿಸಿದ್ದ ವಿದ್ಯೆಗಳನ್ನು ಕಲಿಸುವ ಏರ್ಪಾಟು ಮಾಡಿಕೊಂಡಿದ್ದುವು. ಹೀಗೆ ಚೀನಿಯರ ಶಿಕ್ಷಣದ ಮೂಲಭೂತ ವ್ಯವಸ್ಥೆಯನ್ನು ಅವರು ಒಪ್ಪದಿದ್ದರೂ ಅದರ ಪ್ರಧಾನ ಲಕ್ಷಣಗಳನ್ನು ಆಯ್ದುಕೊಂಡು ತಮ್ಮ ಶಿಕ್ಷಣ ಪದ್ಧತಿಯನ್ನು ರೂಪಿಸಿಕೊಂಡರು. 8ನೆಯ ಶತಮಾನದ ಕೊನೆಯ ವೇಳೆಗೆ ತಮ್ಮದೇ ಆದ ಲಿಪಿಯ ಸೌಂದರ್ಯವನ್ನು ರೂಢಿಸಿಕೊಂಡು ಶಿಕ್ಷಣ ಸಂಸ್ಥೆಗಳು ಉತ್ತಮ ಗದ್ಯಪದ್ಯ ರಚನೆಗೆ ಆರಂಭಿಸಿದ್ದುವು; ಚೀನದ ಪ್ರಾಚೀನ ಗ್ರಂಥಗಳ ಪಠನಕ್ಕೂ ಅವಕಾಶ ಮಾಡಿಕೊಂಡಿದ್ದುವು.

ಸಾಮಂತ ಪ್ರಭುಗಳ ಕಾಲದಲ್ಲಿ ಶಿಕ್ಷಣ: ಸಾಮ್ರಾಟರ ಕೇಂದ್ರ ಸರ್ಕಾರದ ಬಲ ಕುಂದಿದಂತೆ ದೇಶಾದ್ಯಂತ ಸಾಮಂತ ಮಂಡಲಗಳು ರೂಪುಗೊಂಡ ಮೇಲೆ ಶಿಕ್ಷಣ ಪ್ರಸಾರದ ಹೊಣೆಗಾರಿಕೆಯ ಬಹುಪಾಲು ಬೌದ್ಧಮಠಗಳ ಪಾಲಿಗೆ ಬಂತು. ಆ ಮಠಗಳು ಅಲ್ಲಲ್ಲಿ ದೇವಾಲಯದ ಪಾಠಶಾಲೆಗಳನ್ನು ಆರಂಭಿಸಿ ಮಕ್ಕಳಿಗೆ ಓದುಬರೆಹ, ಲೆಕ್ಕಗಳನ್ನೂ ನೀತಿಪಾಠಗಳನ್ನೂ ಬೋಧಿಸುತ್ತಿದ್ದುವು. ಪ್ರಾಥಮಿಕ ಮಟ್ಟದ ಈ ಶಿಕ್ಷಣ ಅಭಿವೃದ್ಧಿಯಾದಂತೆ ದೇಶದಲ್ಲಿ ಆಗಲೆ ರೂಪುಗೊಳ್ಳಲು ಆರಂಭವಾಗಿದ್ದ ಉನ್ನತ ಶಿಕ್ಷಣ ವ್ಯವಸ್ಥೆ ಮುನ್ನಡೆ ಸಾಧಿಸಿತು. ಬೌದ್ಧಮಠಗಳು ಮಧ್ಯಯುಗದ ಯೂರೋಪಿನ ಕ್ರೈಸ್ತಮತ ಪೀಠಗಳಂತೆ, ಜನಾಂಗ ರೂಢಿಸಿದ್ದ ಜ್ಞಾನ ಸಂಪತ್ತನ್ನು ಪ್ರಚಾರ ಮಾಡುವುದರ ಜೊತೆಗೆ ಅದನ್ನು ಸಂರಕ್ಷಿಸುವ ಮತ್ತು ಸಂವರ್ಧನಗೊಳಿಸುವ ಸಂಸ್ಥೆಗಳಾಗಿ ಕೆಲಸ ಮಾಡುತ್ತಿದ್ದುವು. ಅವುಗಳ ಆಶ್ರಯದಲ್ಲಿ ಆಷೀಕಾಗಾದಂಥ ಅನೇಕ ಕಾಲೇಜುಗಳ ಆರಂಭವಾದುವು. ಷೋಮಿಯೋಜಿಯಂಥ ಗ್ರಂಥಾಲಯಗಳೂ (1275) ಸ್ಥಾಪನೆಯಾದುವು. ಎಲ್ಲೆಲ್ಲೂ ಸಾಮಂತರ ಆಡಳಿತವಿದ್ದು, ಆಗಾಗ ಸೈನಿಕ ಕಾರ್ಯಾಚರಣೆಗಳಿಗೆ ಪ್ರಾಶಸ್ತ್ಯವಿದ್ದ ಈ ಕಾಲದಲ್ಲಿ ಸಾಮಂತರನೇಕರು ತಮ್ಮ ಆಸ್ಥಾನಗಳಲ್ಲಿ ಪಂಡಿತರಿಗೆ ತೋರುತ್ತಿದ್ದ ಗೌರವಾಭಿಮಾನಗಳು ಜನತೆ ಹಾಗೂ ಆಡಳಿತಗಾರರು ಶಿಕ್ಷಣದ ಬಗ್ಗೆ ತಳೆದಿದ್ದ ಆಸಕ್ತಿಯನ್ನು ವ್ಯಕ್ತಪಡಿಸುತ್ತವೆ.

ಟೋಕುಗಾವಾನ ಕಾಲದಲ್ಲಿ ಶಿಕ್ಷಣ: ಹದಿನೇಳನೆಯ ಶತಮಾನದ ಆದಿಯಲ್ಲಿ ಆರಂಭವಾದ ಟೋಕೂಗಾವಾನ ಆಳ್ವಿಕೆಯಲ್ಲಿ ಶಿಕ್ಷಣಕ್ಕೆ ತುಂಬ ಪ್ರೋತ್ಸಾಹ ದೊರಕಿತು. ಅವರ ಕಾಲದಲ್ಲಿ ಅದು ತನಕ ಭೋರ್ಗರೆಯುತ್ತಿದ್ದ ಕದನಗಳಲ್ಲಿ ಭಾಗವಹಿಸಲು ಸೈನಿಕ ಶಿಕ್ಷಣಕ್ಕೆ ಮಾತ್ರ ಪ್ರಾಶಸ್ತ್ಯವಿತ್ತು; ಈಗ ಯುವಕರಿಗೆ ಶಾಂತಿಕಾಲದ ನಾಗರಿಕ ಆಡಳಿತದ ಶಿಕ್ಷಣವನ್ನು ಕೊಡುವ ಕಾರ್ಯ ಆರಂಭವಾಯಿತು. ಅದಕ್ಕಾಗಿ ದೇಶಾದ್ಯಂತ ನೂರಾರು 'ಸಾಮುರೈ ಶಾಲೆಗಳು ಆರಂಭವಾದುವು. ಅಲ್ಲಿಗೆ 7ರಿಂದ 15 ವರ್ಷದ ಬಾಲಕರು ಸೇರಿ ಶಿಕ್ಷಣ ಪಡೆಯುತ್ತಿದ್ದರು. 15 ವರ್ಷದವರೆಗೆ ಶಿಕ್ಷಣ ಪಡೆದವರು ಅಲ್ಲೇ ವಸತಿ ವಿದ್ಯಾರ್ಥಿಗಳಾಗಿ ಶಿಕ್ಷಣವನ್ನು ಮುಂದುವರಿಸುತ್ತಿದ್ದರು. ವರ್ಷಕ್ಕೆ ಎರಡಾವರ್ತಿ ಉನ್ನತಾಧಿಕಾರಿಗಳ ಸಮ್ಮುಖದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಭಾರತದ ಗುರುಕುಲಗಳಲ್ಲಿದ್ದಂತೆ ಈ ಶಾಲೆಗಳೂ ಗುರುಶಿಷ್ಯ ಬಾಂಧವ್ಯ ಉನ್ನತ ಆದರ್ಶಗಳ ಮೇಲೆ ರೂಪುಗೊಂಡಿತ್ತು. ವಿದ್ಯಾರ್ಥಿಗಳು ತಮ್ಮ ಗುರುಗಳೊಡನೆ ಭಕ್ತಿಗೌರವಗಳಿಂದ ನಡೆದುಕೊಳ್ಳುತ್ತಿದ್ದರು. ಟೋಕೂಗಾವಾ ಸೈನಿಕವರ್ಗ ಕಾನ್ ಫ್ಯೂಷಸನ ನವೀಕೃತ ಸಿದ್ಧಾಂತವನ್ನು ನಿಷ್ಠೆಯಿಂದ ಅಧ್ಯಯನ ಮಾಡಿ ಆಚರಣೆಯಲ್ಲಿ ಅನುಷ್ಠಾನಕ್ಕೆ ತರುತ್ತಿದ್ದರು. ಸಾಮುರೈ ಶಾಲೆಗಳು ಮಾತಾಪಿತೃಗಳಲ್ಲಿ ಭಕ್ತಿಯನ್ನೂ ಹಿರಿಯರಲ್ಲಿ ಗೌರವವನ್ನೂ ವಿದ್ಯಾರ್ಥಿ ಸಮೂಹದಲ್ಲಿ ಬೆಳೆಸುತ್ತಿದ್ದುವು; ಸೈನಿಕರಲ್ಲಿ ನೈತಿಕ ದೃಷ್ಟಿಯ ಶಿಸ್ತನ್ನು ಪೋಷಿಸುತ್ತಿದ್ದುವು. ನಗರಗಳಲ್ಲಿ ವರ್ತಕರು ತಮ್ಮದೇ ಆದ ಶಾಲೆಗಳನ್ನು ಸ್ಥಾಪಿಸಿಕೊಂಡು ವಾಣಿಜ್ಯ ವ್ಯವಹಾರಗಳನ್ನೂ ಕಾನ್‍ಫ್ಯೂಷಸನ ಸಿದ್ಧಾಂತವನ್ನೂ ಬೋಧಿಸಲು ವ್ಯವಸ್ಥೆ ಮಾಡಿಕೊಂಡಿದ್ದರು. ಹಿಂದಿನಿಂದ ನಡೆದುಕೊಂಡು ಬರುತ್ತಿದ್ದ ಇತರ ವಿಧದ ಶಿಕ್ಷಣ ಸಂಸ್ಥೆಗಳೂ ಮುಂದುವರಿಯುತ್ತಿದ್ದುವು. ದೇವಾಲಯದ ಶಾಲೆಗಳು ದೇಶಾದ್ಯಂತ ವ್ಯವಸ್ಥೆಗೊಂಡು ಪ್ರಾಥಮಿಕ ಶಿಕ್ಷಣವನ್ನು ನೀಡುತ್ತಿದ್ದುವು. ಸರ್ಕಾರ ಚೀನೀ ಪಠ್ಯಪುಸ್ತಕಗಳನ್ನು ಭಾಷಾಂತರಿಸಿ ಬಳಕೆಗೆ ತರಲು ಪ್ರೋತ್ಸಾಹ ನೀಡುತ್ತಿತ್ತು. ಆದರೆ ಪಾಶ್ಚಾತ್ಯ ದೇಶಗಳ ಗ್ರಂಥಗಳನ್ನು ದೇಶದೊಳಕ್ಕೆ ಬರಗೊಡುತ್ತಿರಲಿಲ್ಲ. ಯೂರೋಪಿನ ಸಾಹಿತ್ಯವನ್ನು ರಾಷ್ಟ್ರದಲ್ಲಿ ಬಹಿಷ್ಕರಿಸಿದ್ದರಿಂದ ಜ್ಞಾನ ಪ್ರಗತಿಗೆ ಆಗುತ್ತಿದ್ದ ನಷ್ಟವನ್ನು ಮನಗಂಡ ಪ್ರಗತಿಶೀಲರು ಈ ಧೋರಣೆಯನ್ನು ಒಪ್ಪಲಿಲ್ಲ. ಕೆಲವರು ಟೋಕೂಗಾವನ ಆಳ್ವಿಕೆಯ ಕೊನೆಕೊನೆಗೆ ಡಚ್ಚರ ಗ್ರಂಥಗಳನ್ನು ಅಧ್ಯಯನ ಮಾಡಿ ಜಪಾನಿನ ಶಿಕ್ಷಣ ಪದ್ಧತಿಗೂ ಜ್ಞಾನರಾಶಿಗೂ ಪ್ರಗತಿಯ ನೂತನ ಮುಂಬನ್ನು ರಚಿಸಿಕೊಟ್ಟರು. ಅವರ ಯತ್ನದ ಫಲವಾಗಿ ಜಪಾನಿನ ಶಿಕ್ಷಣದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಯಿತು.
ಮೇಜೀ ಸಾಮ್ರಾಟರ ಕಾಲದಲ್ಲಿ ಶಿಕ್ಷಣ: ಜಪಾನಿನ ಆಧುನಿಕ ಶಿಕ್ಷಣ ಪದ್ಧತಿ 1868ರಲ್ಲಿ ಮೇಜೀ ಸಾಮ್ರಾಟರ ಪುನಃಸ್ಥಾಪನೆಯೊಡನೆ ಆರಂಭವಾಯಿತು. ಕಿರಿಯ ಮೇಜೀ ಸಾಮ್ರಾಟ ಸಿಂಹಾಸನವೇರುವಾಗ ಜನತೆ 'ಸಾಮ್ರಾಜ್ಯದ ಕಲ್ಯಾಣಕ್ಕಾಗಿ ಪ್ರಪಂಚದ ಎಲ್ಲೆಡೆಯಿಂದಲೂ ಜ್ಞಾನವನ್ನು ಅರಸಲಾಗುವುದು ಎಂದು ಪ್ರಮಾಣ ವಚನ ಸ್ವೀಕರಿಸುವಂತೆ ಮಾಡಿತು. ಆ ವಚನ ಪಾಲನೆಯ ಪ್ರಥಮ ಯತ್ನವಾಗಿ ಸಾಮ್ರಾಜ್ಯ ಸರ್ಕಾರ ಶಿಕ್ಷಣ ಸಚಿವಾಲಯವನ್ನು ಸ್ಥಾಪಿಸಿತು. ಸಾಮಂತ ಪ್ರಭುಗಳ ದೀರ್ಘಾವಧಿಯ ಆಳ್ವಿಕೆಯಲ್ಲಿ `ತೆರಕೋಯ ಪಾಠಶಾಲೆಗಳು ಆರಂಭವಾಗಿ ಅಂದಿಗಾಗಲೆ ಅಧಿಕ ಸಂಖ್ಯೆಯಲ್ಲಿ ಸ್ಥಾಪನೆಯಾಗಿದ್ದುವು. 1872ರಲ್ಲಿ ಸಾಮ್ರಾಟರು ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ಸೌಲಭ್ಯವನ್ನೊಳಗೊಂಡ ಕಾನೂನನ್ನು ಮಾಡಿದರು. ಇದರಿಂದ ಶಿಕ್ಷಣ ತೀವ್ರಗತಿಯಲ್ಲಿ ಪ್ರಸಾರವಾಗಲು ಅವಕಾಶವಾಯಿತು. 1873ರ ವೇಳೆಗೆ ದೇಶದಲ್ಲಿ 8,000 ಖಾಸಗಿ ಮತ್ತು ಸರ್ಕಾರದ ಪ್ರಾಥಮಿಕ ಶಾಲೆಗಳು ಅಸ್ತಿತ್ವದಲ್ಲಿದ್ದುವು. ಅವುಗಳಲ್ಲಿ 80,00,000ಕ್ಕೂ ಹೆಚ್ಚು ಮಂದಿ ಶಿಕ್ಷಣ ಪಡೆಯುತ್ತಿದ್ದರು. 1879ರ ವೇಳೆಗೆ ಆ ಶಾಲೆಗಳ ಸಂಖ್ಯೆ 26,000ಕ್ಕೆ ಹೆಚ್ಚಿ, ಅಲ್ಲಿ 25,00,000 ವಿದ್ಯಾರ್ಥಿಗಳು ಸೇರಿದ್ದರು. ಅದೇ ಕಾಲಾವಧಿಯಲ್ಲಿ ಪ್ರೌಢಶಾಲೆಗಳು ಸಂಖ್ಯೆಯಲ್ಲಿ 20ರಿಂದ 700ಕ್ಕೆ ಹೆಚ್ಚಿದುವು. 1877ರಲ್ಲಿ ಟೋಕೀಯೊದ ಸಾಮ್ರಾಜ್ಯ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. 1886ರಲ್ಲಿ 3 ವರ್ಷದ ಶಿಕ್ಷಣವನ್ನು ಕಡ್ಡಾಯ ಮಾಡಲಾಯಿತು. ದೇಶದ ಬೇರೆ ಬೇರೆ ಭಾಗಗಳಲ್ಲಿ ಅನೇಕ ಔದ್ಯೋಗಿಕ ಶಾಲೆಗಳೂ ನಾರ್ಮಲ್ ಶಾಲೆಗಳೂ ಸಿದ್ಧತಾಪಾಠಶಾಲೆಗಳೂ ನೂತನವಾಗಿ ಅಸ್ತಿತ್ವಕ್ಕೆ ಬಂದುವು. 1900ರಲ್ಲಿ ಕಡ್ಡಾಯ ಶಿಕ್ಷಣದ ಕಾಲಾವಧಿ ನಾಲ್ಕು ವರ್ಷಕ್ಕೆ ಹೆಚ್ಚಿತು. ಸರ್ಕಾರದ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯ ಶಿಕ್ಷಣದ ಶಾಸನದನ್ವಯ ಶುಲ್ಕ ವಜ ಆಯಿತು. 1908ರಲ್ಲಿ ವಿಶ್ವವಿದ್ಯಾಲಯಕ್ಕಿಂತ ಸ್ವಲ್ಪ ಕಡಿಮೆ ಮಟ್ಟದ ವೃತ್ತಿಶಿಕ್ಷಣ ಸಂಸ್ಥೆಗಳು (ಕಾಲೇಜು) ಆರಂಭವಾದುವು. ನಾಲ್ಕು ವರ್ಷದ ಕಡ್ಡಾಯ ಶಿಕ್ಷಣದ ಕಾಲಾವಧಿಯನ್ನು ಆರು ವರ್ಷಕ್ಕೆ ಹೆಚ್ಚಿಸಲಾಯಿತು. ಪ್ರೌಢಶಾಲೆಯ ಶಿಕ್ಷಣ ಆರು ವರ್ಷದ್ದಾಗಿ, ಆರು ತರಗತಿಗಳನ್ನು ಅಳವಡಿಸಿಕೊಂಡಿತು. 1920ರ ವೇಳೆಗೆ ಕಡ್ಡಾಯ ಶಿಕ್ಷಣದ ವಯೋಮಾನದ ಮಕ್ಕಳಲ್ಲಿ 99ರಷ್ಟು ಯೋಜನೆಗೆ ಒಳಪಟ್ಟಿದ್ದರು. ಅನಂತರ ತಾಂತ್ರಿಕ ಮತ್ತು ಔದ್ಯೋಗಿಕ ಶಾಲೆಗಳೂ ಬಾಲಕಿಯರಿಗೆ ಪ್ರತ್ಯೀಕ ಪಾಠಶಾಲೆಗಳೂ ವಿಶಿಷ್ಟ ಪಾಠಶಾಲೆಗಳೂ ಆರಂಭವಾದುವು. 1938ರ ವೇಳೆಗೆ ದೇಶದಲ್ಲಿ ಒಟ್ಟು 1,20,00,000 ಮಂದಿ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದರು. ಆಗ 22,000 ಪ್ರೌಢ ಮತ್ತು ಇತರ ವಿಶಿಷ್ಟ ಪಾಠಶಾಲೆಗಳಿದ್ದು, ಅಲ್ಲಿ 35,00,000 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಅಂದಿಗಾಗಲೆ ಜಪಾನು ಪ್ರಪಂಚದಲ್ಲೆಲ್ಲ ಅತ್ಯಂತ ಹೆಚ್ಚಿನ ಶೇಕಡಾ ಪ್ರಮಾಣದಲ್ಲಿ ಅಕ್ಷರಸ್ಥರನ್ನೊಳಗೊಂಡಿತ್ತು.

ಯೂರೋಪಿನ, ಮುಖ್ಯವಾಗಿ ಜರ್ಮನಿಯ ಶಿಕ್ಷಣ ಪದ್ಧತಿಯಿಂದ ಪ್ರಗತಿಪರ ಅಂಶಗಳನ್ನು ಜಪಾನು ಆಯ್ದುಕೊಂಡು ತನ್ನ ಶಿಕ್ಷಣ ಪದ್ಧತಿಯನ್ನು ಪರಿಪುಷ್ಟಿಗೊಳಿಸಿಕೊಂಡಿತು. ಪಠ್ಯಕ್ರಮದಲ್ಲಿ ಯೂರೋಪಿನ ವಿಜ್ಞಾನ ಮತ್ತು ತಂತ್ರಶಾಸ್ತ್ರಗಳಿಗೂ ತನ್ನ ಸಾಂಪ್ರದಾಯಿಕ ಮೌಲ್ಯ ಮತ್ತು ಆದರ್ಶಗಳಿಗೂ ಸಮಸಮವಾಗಿ ಅವಕಾಶ ಕಲ್ಪಿಸಿಕೊಂಡಿತು; ಪ್ರಾಥಮಿಕ ಶಾಲೆಯಲ್ಲಿ ನೀತಿಪಾಠಕ್ಕೆ ಮಹತ್ವ ನೀಡಿ ಮಕ್ಕಳು ಕುಟುಂಬ, ರಾಷ್ಟ್ರ ಮತ್ತು ಚಕ್ರವರ್ತಿಗೆ ವಿಧೇಯತೆಯಿಂದ ನಡೆದುಕೊಳ್ಳುವುದನ್ನು ಕಲಿಸಬೇಕೆಂದು ಸೂಚಿಸಿತು. ಚರಿತ್ರೆ. ರಾಜನೀತಿ, ಭೂಗೋಳ ಮುಂತಾದ ಪಾಠಗಳ ಮೂಲಕ ಮಕ್ಕಳಲ್ಲಿ ರಾಷ್ಟ್ರೀಯ ಭಾವನೆಯನ್ನು ಪೋಷಿಸುವ ವ್ಯವಸ್ಥೆ ಮಾಡಿತು. ಪುರಾಣದ ಕಟ್ಟುಕಥೆಗಳಿಗೆ ಬದಲು ಜೀವನದ ವಾಸ್ತವ ಅಂಶಗಳನ್ನು ಸೇರಿಸುವುದು ಹೆಚ್ಚಿತು. ಪ್ರಾಥಮಿಕ ಹಂತದಲ್ಲಿ ಸಾರ್ವತ್ರಿಕ ಶಿಕ್ಷಣವನ್ನೂ, ಆಯ್ದು ಕೆಲವರಿಗೆ ಮಾತ್ರ ಉನ್ನತ ಶಿಕ್ಷಣವನ್ನೂ ಒದಗಿಸುವ ನೀತಿಯನ್ನು ರಾಷ್ಟ್ರ ಪುರಸ್ಕರಿಸುತ್ತ ಬಂತು. ಕಿಯೊ, ವಾಸಿಡ, ದೋಷಿಷಗಳಂಥ ಖ್ಯಾತ ವಿಶ್ವವಿದ್ಯಾಲಯಗಳನ್ನೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳನ್ನೂ ಅಷ್ಟಾಗಿ ಹೆಚ್ಚಿಸಹೋಗಲಿಲ್ಲ. ಕೇಂದ್ರ ಸರ್ಕಾರ ಅವುಗಳ ಆಡಳಿತ, ಪಠ್ಯಕ್ರಮ, ಪ್ರವೇಶ ನಿಯಮ ಮುಂತಾದವುಗಳ ಮೇಲೆ ಬಿಗಿಯಾದ ನಿಯಂತ್ರಣ ಇಟ್ಟುಕೊಂಡಿತ್ತು.

ಎರಡನೆಯ ಮಹಾಯುದ್ಧಕ್ಕೆ ಸ್ವಲ್ಪಮುಂಚೆ ಜಪಾನಿನ ಶಿಕ್ಷಣ ಪದ್ಧತಿ ವರ್ಗೀಕೃತ ಸಮಾಜ ರಚನೆಗೂ ಉತ್ಕಟ ದೇಶಾಭಿಮಾನದ ಬೆಳೆವಣಿಗೆಗೂ ಸಾಮ್ರಾಜ್ಯವಿಸ್ತರಣ ನೀತಿಗೂ ಅವಕಾಶ ಮಾಡಿಕೊಡುವಂತೆ ವ್ಯವಸ್ಥೆಗೊಂಡಿತ್ತು. 3 ವರ್ಷದಿಂದ 6 ವರ್ಷದ ಮಕ್ಕಳು ಕಿಂಡರ್‍ಗಾರ್ಟನ್‍ಗಳಲ್ಲಿ ಶಿಕ್ಷಣವನ್ನು ಆರಂಭಿಸುತ್ತಿದ್ದರು. ವಿಧಾಯಕ ಕಡ್ಡಾಯ ಶಿಕ್ಷಣ ಆರು ವರ್ಷದ ಪ್ರಾಥಮಿಕ ಶಾಲೆಯಲ್ಲಿ ಆರಂಭವಾಗುತ್ತಿತ್ತು. 6 ರಿಂದ 14 ವರ್ಷದವರೆಗೆ ಶಿಕ್ಷಣ ಕಡ್ಡಾಯವಾಗಿದ್ದುದರಿಂದ ಅನಂತರ ಎರಡು ವರ್ಷದ ಹಿರಿಯ ಪ್ರಾಥಮಿಕ ಶಾಲೆಗೂ ಮಾಧ್ಯಮಿಕ ಶಾಲೆಗೂ ಹೋಗಬಹುದಾಗಿತ್ತು. ಮಾಧ್ಯಮಿಕ ಶಾಲೆ 14ರಿಂದ 19ನೆಯ ವಯಸ್ಸಿನವರೆಗೆ 5 ವರ್ಷಗಳ ಶಿಕ್ಷಣವೀಯುತ್ತಿತ್ತು. ಅಲ್ಲಿ ಉತ್ತಮ ರೀತಿಯ ಶಿಕ್ಷಣ ದೊರೆಯುತ್ತಿತ್ತು. ಆದರೆ ವಿದ್ಯಾರ್ಥಿಗಳು ಶುಲ್ಕ ಕೊಡಬೇಕಾಗಿತ್ತು. ಸೈನಿಕ ಶಿಕ್ಷಣ, ಗಣಿತ, ವಿಜ್ಞಾನ, ಸಾಹಿತ್ಯ-ಇವು ಪಠ್ಯಕ್ರಮದಲ್ಲಿ ಮುಖ್ಯ ವಿಷಯಗಳಾಗಿದ್ದುವು. ಪ್ರತಿಭಾವಂತರು ಮೂರು ವರ್ಷದ ಪ್ರೌಢಶಾಲೆಗೆ ಸೇರುತ್ತಿದ್ದರು. ಅಲ್ಲಿನ ಶಿಕ್ಷಣ ಮುಗಿಸಿದ ಕೆಲವರು ವಿಶ್ವವಿದ್ಯಾಲಯದಲ್ಲಿ ಪದವಿ ತರಗತಿಗೆ ಸೇರುತ್ತಿದ್ದರು. ಪ್ರೌಢಶಾಲೆ ಅಥವಾ ವಿಶ್ವವಿದ್ಯಾಲಯಗಳಿಗೆ ಹೋಗಲಾಗದವರಿಗೆ ಇತರ ಶಿಕ್ಷಣಸಂಸ್ಥೆಗಳಲ್ಲಿ ಸೇರುವ ಅವಕಾಶವೇನೋ ಇತ್ತು.

ಯುದ್ಧಾನಂತರದ ಪುರ್ನವ್ಯವಸ್ಥೆ: ಎರಡನೆಯ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಜಪಾನ್ ಜರ್ಮನಿಯಂತೆ ಅಂತಿಮವಾಗಿ ಮಿತ್ರರಾಷ್ಟ್ರಗಳಿಗೆ ಸೋತಿತ್ತು. ಆಕ್ರಮಣ ರಾಷ್ಟ್ರವಾದ ಅಮೆರಿಕ ಮುಂತಾದ ಮಿತ್ರರಾಷ್ಟ್ರಗಳ ನಿರ್ದೇಶನದಂತೆ 1946ರಲ್ಲಿ ಜಪಾನಿನ ಹೊಸ ರಾಜ್ಯಾಂಗ ರಚನೆ ರೂಪುಗೊಂಡಿತು. ಅದರಲ್ಲಿ ಶಿಕ್ಷಣ ಸೌಲಭ್ಯದ ಬಗ್ಗೆ ಜನತೆಯ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಕುರಿತ ಕಾನೂನಿನಲ್ಲಿ ನಿರ್ಧಾರವಾಗಿರುವಂತೆ ಎಲ್ಲರೂ ತಮ್ಮ ಕರ್ತವ್ಯಗಳನ್ನು ಕುರಿತ 'ಕಾನೂನಿನಲ್ಲಿ ನಿರ್ಧರವಾಗಿರುವಂತೆ ಎಲ್ಲರೂ ತಮ್ಮ ತಮ್ಮ ಯೋಗ್ಯತೆಗೆ ಅನುಗುಣವಾಗಿ ಸಮಾನ ಶಿಕ್ಷಣವನ್ನು ಪಡೆಯುವರು. ಜನರು ತಮ್ಮ ರಕ್ಷಣೆಯಲ್ಲಿರುವ ಬಾಲಕ ಬಾಲಕಿಯರಿಗೆ ಕಾನೂನಿನಲ್ಲಿ ಸೂಚಿಸಿರುವಂತೆ ಸಾಮಾನ್ಯ ಶಿಕ್ಷಣವೊದಗಿಸತಕ್ಕದ್ದು. ಅಂಥ ಕಡ್ಡಾಯ ಶಿಕ್ಷಣ ಉಚಿತವಾಗಿರುತ್ತದೆ ಎಂದು ಸೂಚಿಸಿತ್ತು. ರಾಜ್ಯಾಂಗ ರಚನೆಯ ಉದ್ದೇಶಕ್ಕನುಗುಣವಾಗಿ ಶಿಕ್ಷಣದ ಉದ್ದೇಶ ಮತ್ತು ತತ್ತ್ವಗಳನ್ನು ಒಳಗೊಂಡ ಶಿಕ್ಷಣದ ಮೂಲಭೂತ ಕಾನೂನು 1947ರಲ್ಲಿ ಆಚರಣೆಗೆ ಬಂತು. ಅದರಲ್ಲಿ 'ಮಾನವೀಯ ಮೌಲ್ಯಗಳನ್ನು ಗೌರವಿಸುವ ಒಂದು ಶಾಂತಿಪ್ರಿಯ ಲೋಕತಂತ್ರ ರಾಷ್ಟ್ರದ ಹಾಗೂ ಸಮಾಜದ ಸ್ವಾವಲಂಬಿ ಪೌರರನ್ನಾಗಿ ರೂಪಿಸುವುದು ಶಿಕ್ಷಣದ ಮುಖ್ಯ ಉದ್ದೇಶ ಎಂದು ಉಲ್ಲೇಖಿಸಿದೆ. 'ಸಾರ್ವತ್ರಿಕ ಹಾಗೂ ವೈಯಕ್ತಿಕ ಸಂಸ್ಕಾರವೇ ಉದ್ದೇಶವಾಗುಳ್ಳ ಶಿಕ್ಷಣವನ್ನು ಎಲ್ಲೆಡೆಯೂ ಪ್ರಸಾರ ಮಾಡುವುದರ ಜೊತೆಗೆ ವೈಯಕ್ತಿಕ ಘನತೆಯನ್ನು ಗೌರವಿಸಿ ಸತ್ಯವಂತರೂ ಶಾಂತಿಪ್ರಿಯರೂ ಆದ ಜನತೆಯ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎಂದು ಆ ಮೂಲಭೂತ ಕಾನೂನಿನ ಪೀಠಿಕೆಯಲ್ಲಿ ಸೂಚಿಸಿದೆ; ಕುಲ, ಧರ್ಮ, ಲಿಂಗ, ಸಾಮಾಜಿಕ ಅಂತಸ್ತು, ಆರ್ಥಿಕ ಸ್ಥಿತಿ, ಕುಟುಂಬದ ಹಿನ್ನೆಲೆ-ಇವೇ ಮುಂತಾದ ಅಂಶಗಳ ಆಧಾರದ ಮೇಲೆ ವ್ಯತ್ಯಾಸ ಕಲ್ಪಿಸದೆ ಎಲ್ಲರಿಗೂ ಅವರವರ ಯೋಗ್ಯತೆಯನ್ನನುಸರಿಸಿ ಸಮಾಜ ಶಿಕ್ಷಣ ಸೌಲಭ್ಯವನ್ನು ಒದಗಿಸಬೇಕಾಗಿ ಸೂಚಿಸಿದೆ; ಸಹಶಿಕ್ಷಣವನ್ನು ಅಧಿಕೃತವಾಗಿ ಅಂಗೀಕರಿಸಿದೆ; ಸಾರ್ವಜನಿಕ ಶಾಲೆಗಳಲ್ಲಿ ಸಮಾಜಪಾಠಕ್ಕೆ ಪ್ರಾಮುಖ್ಯವಿತ್ತಿದೆ; ವಯಸ್ಕರ ಶಿಕ್ಷಣಕ್ಕಾಗಿ ಗ್ರಂಥಾಲಯ, ವಸ್ತುಸಂಗ್ರಹಾಲಯ, ಪೌರಭವನ ಮುಂತಾದವನ್ನು ಸ್ಥಾಪಿಸಲು ಸ್ಥಳೀಯ ಪ್ರಾಧಿಕಾರಗಳಿಗೆ (ಲೋಕಲ್ ಎಜುಕೇಷನ್ ಅಥಾರಿಟೀಸ್) ಅಣತಿಯಿತ್ತಿದೆ.

ಶಿಕ್ಷಣದ ಮೂಲಭೂತ ಕಾನೂನನ್ನನುಸರಿಸಿ ಹೊರಡಿಸಿದ ನಿಯಮಗಳು ಸಾರ್ವಜನಿಕ ಶಿಕ್ಷಣದ ಆಡಳಿತವನ್ನು ವಿಕೇಂದ್ರೀಕರಿಸಿದುವು. 6+3+3+4ರ ಶಿಕ್ಷಣ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದುವು; ಪಠ್ಯಕ್ರಮ, ಪಠ್ಯವಿಷಯ, ಬೋಧನವಿಧಾನ, ಪಠ್ಯಪುಸ್ತಕ-ಒಟ್ಟಿನಲ್ಲಿ ಇಡೀ ಶಿಕ್ಷಣವನ್ನು ಪುನವ್ರ್ಯವಸ್ಥೆಗೊಳಿಸಿದುವು. 1946ರಲ್ಲಿ ಅಮೆರಿಕದ ಸಂಯುಕ್ತ ಸಂಸ್ಥಾನಗಳ ಸರ್ಕಾರ ಕಳಿಸಿದ ಶಿಕ್ಷಣ ಆಯೋಗ ಸೂಚಿಸಿದಂತೆ ಹಿಂದಿನಿಂದಲೂ ಬಂದಿದ್ದ ಷಿಂಟೋ ಮತ್ತು ಷುಷಿನ್ (ನೀತಿ) ಪಾಠಗಳನ್ನು ತೆಗೆದುಹಾಕಲಾಯಿತು. ಹೊಸ ಪಠ್ಯಪುಸ್ತಕಗಳು ಬರುವವರೆಗೆ ಜಪಾನಿನ ಇತಿಹಾಸ ಮತ್ತು ಭೂವಿವರಣೆಯ ಪಾಠಗಳ ಬೋಧನೆಯನ್ನು ನಿಲ್ಲಿಸಲಾಯಿತು. ಸಮಾಜ ವಿಜ್ಞಾನ, ತರಗತಿಯ ಕಾರ್ಯವಿಧಾನ, ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳೆವಣಿಗೆ, ಸ್ವಯಂ ಅಭಿವ್ಯಕ್ತಿ-ಇವಕ್ಕೆ ಶಿಕ್ಷಣದ ಎಲ್ಲ ಹಂತಗಳಲ್ಲೂ ಪ್ರಾಧಾನ್ಯ ಬಂತು. ಕಾವ್ಯಭಾಗಗಳನ್ನು ಹೃದ್ಗತ ಮಾಡುವುದರ ಬದಲು ತರಗತಿಯಲ್ಲಿ ಚರ್ಚೆ, ಸಾಮೂಹಿಕ ಮತ್ತು ವೈಯಕ್ತಿಕ ರಚನಾತ್ಮಕ ಕಾರ್ಯ-ಇವು ಶಿಕ್ಷಣದ ಕೇಂದ್ರವಾಗುತ್ತ ಬಂದುವು.
ಶಿಕ್ಷಣ ವ್ಯವಸ್ಥೆಯಲ್ಲಿ ಅಮೆರಿಕದಲ್ಲಿರುವಂತೆ 6+3+3+4ರ ಯೋಜನೆ ಆಚರಣೆಗೆ ಬಂತು. ಕಡ್ಡಾಯ ಶಿಕ್ಷಣದ ಕಾಲಾವಧಿ 6 ರಿಂದ 9 ವರ್ಷಕ್ಕೆ ಹೆಚ್ಚಿತು. ಎಲ್ಲರಿಗೂ ಉನ್ನತ ಶಿಕ್ಷಣ ಸೌಲಭ್ಯವನ್ನು ದೊರಕಿಸುವುದಕ್ಕಾಗಿ ಅಮೆರಿದ ರಾಜ್ಯ ವಿಶ್ವವಿದ್ಯಾಲಯಗಳ ಮಾದರಿಯಲ್ಲಿ ಜಿಲ್ಲಾ ಕಾಲೇಜುಗಳನ್ನು ಆರಂಭಿಸಲಾಯಿತು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಜಿಲ್ಲೆಯ ಮತ್ತು ಪೌರಸಭೆಗಳ ಆರಿಸಿದ ಪ್ರತಿನಿಧಿಗಳನ್ನೊಳಗೊಂಡ ಮಂಡಲಿಗಳಿಗೆ ವರ್ಗವಾಯಿತು. ಕೇಂದ್ರ ಮಂತ್ರಿಮಂಡಲಕ್ಕೆ ಸ್ಥಳೀಯ ಸರ್ಕಾರಗಳಿಗೆ ಕೇವಲ ಸಲಹೆ ನೀಡುವ ಅಧಿಕಾರ ಮಾತ್ರ ಉಳಿದಿತ್ತು.

ನೂತನ ಸುಧಾರಣೆಗಳು ಆಚರಣೆಗೆ ಬಂದಮೇಲೆ 1950ರ ವೇಳೆಗೆ ರಾಷ್ಟ್ರದಲ್ಲಿ 6,500 ಕಿಂಡರ್‍ಗಾರ್ಟನ್‍ಗಳೂ ಅವುಗಳಲ್ಲಿ 32,000 ಅಧ್ಯಾಪಕರೂ 6,65,000 ವಿದ್ಯಾರ್ಥಿಗಳೂ ಇದ್ದರು; 22,500 ಪ್ರಾಥಮಿಕ ಶಾಲೆಗಳೂ ಇವುಗಳಲ್ಲಿ 3,55,000 ಅಧ್ಯಾಪಕರೂ 13,00,000 ವಿದ್ಯಾರ್ಥಿಗಳೂ ಇದ್ದರು ; 12,700 ಕಿರಿಯ ಪ್ರೌಢಶಾಲೆಗಳೂ ಅವುಗಳಲ್ಲಿ 2,06,000 ಅಧ್ಯಾಪಕರೂ 58,00,000 ವಿದ್ಯಾರ್ಥಿಗಳೂ ಇದ್ದರು ; 3,380 ಹಿರಿಯ ಪ್ರೌಢಶಾಲೆಗಳೂ ಅವುಗಳಲ್ಲಿ 1,40,000 ಅಧ್ಯಾಪಕರೂ 30,00,000 ವಿದ್ಯಾರ್ಥಿಗಳೂ ಇದ್ದರು: 270 ಕಿರಿಯ (ಜೂನಿಯರ್) ಕಾಲೇಜುಗಳೂ ವಿಶ್ವವಿದ್ಯಾಲಯಗಳೂ ಅಲ್ಲಿ 1,40,000 ಅಧ್ಯಾಪಕರೂ 5,70,000 ವಿದ್ಯಾರ್ಥಿಗಳೂ ಇದ್ದರು.

ಯುದ್ಧದಲ್ಲಿ ಸೋಲನ್ನನುಭವಿಸಿ ಅನ್ಯರಿಗೆ ಪದಾಕ್ರಾಂತವಾದ ರಾಷ್ಟ್ರ ವಿಧಿಯಿಲ್ಲದೆ ಅಮೆರಿಕ ಹೊರಿಸಿದ ಶಿಕ್ಷಣ ಸುಧಾರಣೆಗಳನ್ನು ಆಚರಣೆಗೆ ತರಬೇಕಾಯಿತು. ಆದರೆ ಅನ್ಯದೇಶದ ಆ ಪದ್ಧತಿ ತಮ್ಮ ಜನಕ್ಕೆ ಉಚಿತವಾಗಲಾರದೆಂಬುದನ್ನು ಅವರು ಬೇಗ ಕಂಡುಕೊಂಡರು. ಕಾಲ ಕಳೆದಂತೆ ಸುಧಾರಣೆಗಳ ಮೇಲೆ ವಿಧವಿಧವಾದ ಟೀಕೆಗಳು ಬರಲಾರಂಭಿಸಿದುವು. ಹೊಸ ಪಠ್ಯಕ್ರಮದಿಂದ ಮಕ್ಕಳು ತಂದೆತಾಯಿಗಳಲ್ಲಿ ಇಡಬೇಕಾದ ಭಕ್ತಿಭಾವಕ್ಕೂ ರಾಷ್ಟ್ರದ ಬಗ್ಗೆ ತಳೆಯಬೇಕಾದ ಅಭಿಮಾನಕ್ಕೂ ವೈಯಕ್ತಿಕವಾಗಿ ರೂಢಿಸಿಕೊಳ್ಳಬೇಕಾದ ನೈತಿಕ ಜೀವನಕ್ಕೂ ಧಕ್ಕೆಯೊದಗುವುದೆಂದು ದೇಶಾದ್ಯಂತ ಪ್ರತಿಭಟನೆ ಎದ್ದಿತು. ಜನತೆಯ ಆಶೋತ್ತರಗಳಿಗೆ ಅನುಗುಣವಾಗಿ ಯುದ್ಧದ ಸೋಲಿನ ಅಧಃಪತನದಿಂದ ಚೇತರಿಸಿಕೊಂಡು ಮೇಲೆದ್ದ ರಾಷ್ಟ್ರ ಪ್ರಾಥಮಿಕ ಶಾಲೆಯಲ್ಲಿ ಮತ್ತು ನೀತಿಪಾಠವನ್ನು ಆರಂಭಿಸಿತು. ಪಠ್ಯಕ್ರಮ ಮತ್ತು ಬೋಧನವಿಧಾನಗಳ ಮೇಲೆ ಕೇಂದ್ರ ನಿಯಂತ್ರಣವೂ ಆರಂಭವಾಯಿತು. 6+3+3+4ರ ವ್ಯವಸ್ಥೆಯಿಂದ ಶಿಕ್ಷಣ ಅನಗತ್ಯವಾಗಿ ದೀರ್ಘಕಾಲ ಹಿಡಿಯುತ್ತಿದೆಯೆಂಬ ಗೊಣಗಾಟ ಈಗ ಆರಂಭವಾಗಿದೆ. ಮಿತಿಯಿಲ್ಲದೆ ಆರಂಭಿಸಲಾದ ಜಿಲ್ಲಾ ಕಾಲೇಜುಗಳು ಕೇವಲ ಘನತೆಗೇರಿಸಿದ ಪ್ರೌಢಶಾಲೆಗಳಂತಾಗಿವೆಯೆಂಬುದು ಈಗ ಗೊತ್ತಾಗಿಹೋಗಿದೆ. ಮೇಲಿನ ಟೀಕೆಗಳ ಬೆಳಕಿನಲ್ಲಿ ಈಗಾಗಲೆ ಹಲವು ಸುಧಾರಣೆಗಳು ಆಚರಣೆಗೆ ಬಂದಿವೆ. ಅವನ್ನು ಒಳಗೊಂಡಂತೆ ಸದ್ಯದ ಜಪಾನಿನ ಶಿಕ್ಷಣದ ಸ್ವರೂಪವನ್ನು ಮುಂದೆ ವಿವರಿಸಿದೆ.

ಶಿಕ್ಷಣ ವ್ಯವಸ್ಥೆ : ಯುದ್ಧಾನಂತರದ ರಾಷ್ಟ್ರಘಟನೆ ಲೋಕತಂತ್ರಭಾವನೆಯನ್ನು ಶಿಕ್ಷಣ ಕ್ಷೇತ್ರಕ್ಕೂ ಅನ್ವಯಿಸಿದನಂತರ ಅಮೆರಿದ ಶಿಕ್ಷಣ ಆಯೋಗ ಸಲಹೆ ಮಾಡಿದ 6 ವರ್ಷಗಳ ಪ್ರಾಥಮಿಕ ಶಾಲೆ, 3 ವರ್ಷಗಳ ಕಿರಿಯ ಪ್ರೌಢಶಾಲೆ, 3 ವರ್ಷಗಳ ಹಿರಿಯ ಪ್ರೌಢಶಾಲೆ ಮತ್ತು 4 ವರ್ಷಗಳ ಉನ್ನತ ಶಿಕ್ಷಣ ಸಂಸ್ಥೆ, ಎಂದರೆ 6+3+3+4ರ ಯೋಜನೆ ಅನುಷ್ಠಾನಕ್ಕೆ ಬಂತು. ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದ ವರೆಗೆ ಯಾವ ಆತಂಕವೂ ಇಲ್ಲದೆ ಶಿಕ್ಷಣಸೌಲಭ್ಯವನ್ನು ಎಲ್ಲ ಪೌರರಿಗೂ ಒದಗಿಸಿದ್ದಲ್ಲದೆ ಅವರವರ ಪ್ರತಿಭೆ ಮತ್ತು ಅಗತ್ಯಗಳಿಗೊಪ್ಪುವಂಥ ಉನ್ನತ ಶಿಕ್ಷಣ ಪಡೆಯಬಹುದಾದ ಅವಕಾಶವನ್ನು ಕಲ್ಪಿಸಿಕೊಟ್ಟಿತು. 1946ರಲ್ಲಿ ಶಿಕ್ಷಣ ಆಯೋಗ ಸೂಚಿಸಿದ ಅಮೆರಿದ ಮಾದರಿಯ ಶಿಕ್ಷಣ ವ್ಯವಸ್ಥೆ, ಪಠ್ಯಕ್ರಮ, ಬೋಧನವಿಧಾನ, ಪರೀಕ್ಷಾವ್ಯವಸ್ಥೆ ಮುಂತಾದವನ್ನು ಆಗ ಅಕ್ಷರಶಃ ಆಚರಣೆಗೆ ತಂದರೂ ಜಪಾನಿನ ಸ್ಥಿತಿಗತಿಗಳಿಗೂ ಶಿಕ್ಷಣ ಸಂಸ್ಕøತಿಗಳ ಪರಂಪರೆಗೂ ಹೊಂದಿಕೊಳ್ಳುವಂತೆ ಅನಂತರ ಮಾರ್ಪಡಿಸಿಕೊಳ್ಳುತ್ತ ಬಂದಿದೆ.

ಪ್ರಾಥಮಿಕ ಪೂರ್ವದ ಶಿಕ್ಷಣ : 3 ವರ್ಷದಿಂದ 6 ವರ್ಷದವರೆಗಿನ ಮಕ್ಕಳನ್ನು ಸೇರಿಸಿಕೊಳ್ಳುವ ಕಿಂಡರ್‍ಗಾರ್ಟನ್ ಶಾಲೆಗಳು ರಾಷ್ಟ್ರದ ವಿಧಾಯಕ ಶಿಕ್ಷಣವ್ಯವಸ್ಥೆಯಲ್ಲಿ ಸೇರಿರದಿದ್ದರೂ ಆ ವಯೋಮಾನದ ಮಕ್ಕಳಲ್ಲಿ ಸುಮಾರು ಮೂರನೆಯ ಒಂದು ಭಾಗದಷ್ಟು ಮಂದಿಗೆ ಆ ಹಂತದ ಶಿಕ್ಷಣಸೌಲಭ್ಯ ವ್ಯವಸ್ಥೆಗೊಂಡಿದೆ. ಆ ಶಾಲೆಗಳಲ್ಲಿ ಬಹುಪಾಲು ಖಾಸಗಿ ಸಂಘಸಂಸ್ಥೆಗಳಿಂದ ನಡೆಯುತ್ತಿವೆ. ಮೂರು ವರ್ಷದ ಮಕ್ಕಳನ್ನು ಅಲ್ಲಿನ ಮೂರು ವರ್ಷದ ವ್ಯಾಸಂಗ ವಿಭಾಗಕ್ಕೂ ನಾಲ್ಕು ವರ್ಷದ ಮಕ್ಕಳನ್ನು ಎರಡು ವರ್ಷದ ವಿಭಾಗಕ್ಕೂ ಐದು ವರ್ಷದವರನ್ನು ಒಂದು ವರ್ಷದ ವಿಭಾಗಕ್ಕೂ ಸೇರಿಕೊಳ್ಳುವರು. ಅಲ್ಲಿ ಇತರ ದೇಶಗಳಲ್ಲಿರುವ ಕಿಂಡರ್‍ಗಾರ್ಟನ್‍ಗಳಂತೆ ಓದುಬರಹ ಲೆಕ್ಕಗಳನ್ನು ಕಲಿಸುವುದಿಲ್ಲ. ಆಟದ ಮೂಲಕ ಅವರ ಆರೋಗ್ಯ ಜೀವನವನ್ನು ಉತ್ತಮಪಡಿಸಿ, ವೈಯಕ್ತಿಕ ಮತ್ತು ಸಾಮಾಜಿಕ ಜೀವನಕ್ಕೆ ಬೇಕಾದ ಅಭ್ಯಾಸ ಮತ್ತು ಕೌಶಲ್ಯಗಳನ್ನು ರೂಢಿಸಿಕೊಡಲು ಯತ್ನಿಸುವರು. ಇವುಗಳ ಜೊತೆಗೆ ಹಗಲುವೇಳೆ ಮಕ್ಕಳಿಗೆ ಶಿಕ್ಷಣವೀಯುವ ಶಿಶುಗೃಹಗಳೂ ಇವೆ. ಅಲ್ಲಿ ಒಂದು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಂದ ಐದು ವರ್ಷದವರೆಗಿನ ಮಕ್ಕಳನ್ನು ಸೇರಿಸಿಕೊಳ್ಳುವರು. ತಾಯಂದಿರು ಕೆಲಸಕ್ಕೆ ಹೋಗುವಾಗ ತಮ್ಮ ಮಕ್ಕಳನ್ನೂ ಈ ಶಿಶುಗೃಹಕ್ಕೆ ಕಳಿಸುವರು. ಸಂಸ್ಥೆಯ ರಕ್ಷಣೆ ಅಗತ್ಯವೆನಿಸಿರುವಂಥ ಮಕ್ಕಳನ್ನೂ ಅಲ್ಲಿ ಸೇರಿಸಿಕೊಳ್ಳುವರು. ಮೂರು ವರ್ಷದ ಅಥವಾ ಹೆಚ್ಚಿನ ವಯಸ್ಸಿನ ಮಕ್ಕಳಾದರೆ ಅಲ್ಲಿ ಕಿಂಡರ್‍ಗಾರ್ಟನ್ ಮಾದರಿಯ ಶಿಕ್ಷಣವನ್ನು ಅವರಿಗೆ ಒದಗಿಸುವರು. ಇವನ್ನು ಮುಖ್ಯವಾಗಿ ಸ್ಥಳೀಯ ಸರ್ಕಾರದ ಸಂಸ್ಥೆಗಳು ನಡೆಸುತ್ತವೆ. 1968ರಲ್ಲಿ ಈ ಹಂತದ 10,418 ಶಾಲೆಗಳಿದ್ದವು. ಅವುಗಳಲ್ಲಿ 62,439 ಅಧ್ಯಾಪಕರೂ 15,51,017 ಮಂದಿ ವಿದ್ಯಾರ್ಥಿಗಳೂ ಇದ್ದರು.

ಪ್ರಾಥಮಿಕ ಶಿಕ್ಷಣ : ಈಗ 6ರಿಂದ 15 ವರ್ಷದ ಮಕ್ಕಳೆಲ್ಲ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕೆಂದು ಕಾನೂನು ಮಾಡಿದೆ. ಕಡ್ಡಾಯ ಶಿಕ್ಷಣದ ಈ 9 ವರ್ಷದ ಅವಧಿಯನ್ನು ಎರಡು ಹಂತಗಳಿಗೆ ಹಂಚಿದೆ. ಅದರ ಮೊದಲ ಹಂತ 6 ವರ್ಷದ ಪ್ರಾಥಮಿಕ ಶಾಲೆಯಲ್ಲೂ ಎರಡನೆಯ ಹಂತ 3 ವರ್ಷದ ಕಿರಿಯ ಪ್ರೌಢಶಾಲೆಯಲ್ಲೂ ವ್ಯವಸ್ಥೆಗೊಂಡಿದೆ. 6 ರಿಂದ 12 ವರ್ಷದವರೆಗಿನ ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾರೆ. ಶಿಕ್ಷಣ ಎಲ್ಲ ಮಕ್ಕಳಿಗೂ ಉಚಿತ. ಬಡ ಕುಟುಂಬದವರಾದರೆ ರಾಷ್ಟ್ರೀಯ ಮತ್ತು ಸ್ಥಳೀಯ ಸರ್ಕಾರಗಳು ಅವರ ಉಪಾಹಾರ, ಪ್ರವಾಸ, ಪುಸ್ತಕ, ವೈದ್ಯಚಿಕಿತ್ಸೆ ಮುಂತಾದವಕ್ಕೆ ವಿಶೇಷ ಅನುದಾನ ನೀಡುವುವು. ಶಾಲೆಗೆ ಆ ವಯೋಮಾನದ ಮಕ್ಕಳ ಸೇ. 99.9ರಷ್ಟು ಸೇರಿರುವರು. 1968ರಲ್ಲಿ ರಾಷ್ಟ್ರದಲ್ಲಿ ಒಟ್ಟು 25,014 ಪ್ರಾಥಮಿಕ ಶಾಲೆಗಳೂ ಅಲ್ಲಿ 3,61,148 ಅಧ್ಯಾಪಕರೂ 94,03221 ವಿದ್ಯಾರ್ಥಿಗಳೂ ಇದ್ದರು. ಶಾಲೆಯ ಪಠ್ಯಕ್ರಮದಲ್ಲಿ ಜಪಾನೀ ಭಾಷೆ, ಸಮಾಜ ಪಾಠಗಳು, ಅಂಕಗಣಿತ, ವಿಜ್ಞಾನ, ಸಂಗೀತ ಕಲೆ ಮತ್ತು ಕೈಕೆಲಸ, ಗೃಹಕಾರ್ಯನಿರ್ವಹಣೆ, ದೈಹಿಕ ಶಿಕ್ಷಣ, ನೀತಿಶಿಕ್ಷಣ-ಇವೆಲ್ಲ ಸೇರಿವೆ. ಪ್ರಾಥಮಿಕ ಮೊದಲ ತರಗತಿಗೆ ವಾರಕ್ಕೆ 45 ನಿಮಿಷಗಳ 24 ಪಾಠಗಳೂ 2ನೆಯ ತರಗತಿಗೆ 25 ಪಾಠಗಳೂ 3ನೆಯ ತರಗತಿಗೆ 27 ಪಾಠಗಳೂ 4ನೆಯ ತರಗತಿಗೆ 29 ಪಾಠಗಳೂ 5ನೆಯ ತರಗತಿಗೆ 31 ಪಾಠಗಳೂ 6ನೆಯ ತರಗತಿಗೆ 31 ಪಾಠಗಳೂ ಇರುತ್ತವೆ. ಶಾಲಾವರ್ಷದಲ್ಲಿ 35 ವಾರಗಳಿರುತ್ತವೆ.
ಕಿರಿಯ ಪ್ರೌಢಶಾಲೆ : ಪ್ರಾಥಮಿಕ ಶಾಲೆಯನ್ನು ಮುಗಿಸಿದ ಮಕ್ಕಳು ನೇರವಾಗಿ 3 ವರ್ಷದ ಕಿರಿಯ ಪ್ರೌಢಶಾಲೆಗೆ ಸೇರುವರು. ಅಲ್ಲೂ ಶಿಕ್ಷಣ ಕಡ್ಡಾಯ ಮತ್ತು ಉಚಿತ. ಮಕ್ಕಳ ಹಾಜರಾತಿ ಸೇ. 99.9. ರಾಷ್ಟ್ರದಲ್ಲಿ 1968ರಲ್ಲಿ ಒಟ್ಟು 11,278 ಕಿರಿಯ ಪ್ರೌಢಶಾಲೆಗಳೂ ಅಲ್ಲಿ 2,27,405 ಅಧ್ಯಾಪಕರೂ 48,65,206 ವಿದ್ಯಾರ್ಥಿಗಳೂ ಇದ್ದರು. ಪ್ರಾಥಮಿಕ ಶಾಲೆಯ ಪಠ್ಯಕ್ರಮ ಇಲ್ಲಿ ಮುಂದುವರಿಯುತ್ತದೆ. ಆದರೆ ಅಂಕಗಣಿತ ಗಣಿತವಾಗಿ ವಿಸ್ತರಿಸುತ್ತದೆ. ಲಲಿತಕಲೆ, ಔದ್ಯೋಗಿಕ ಕಸಬು ಕಲೆಗಳು, ಐಚ್ಛಿಕ ವಿಷಯಗಳು ಹೊಸದಾಗಿ ಸೇರಿವೆ. ಪಠ್ಯೇತರ ಚಟುವಟಿಕೆಗಳನ್ನೂ ಸೇರಿಸಿದೆ. ವರ್ಷದಲ್ಲಿ 35 ವಾರಗಳಿದ್ದು ಪ್ರತಿವಾರದಲ್ಲೂ 33-34 ಪಾಠಗಳಿರುತ್ತವೆ. ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ಐಚ್ಛಿಕ ವಿಷಯಗಳನ್ನು ಆರಿಸಿಕೊಳ್ಳಬಹುದು. ಅನ್ಯಭಾಷೆ (ಇಂಗ್ಲಿಷ್) ಔದ್ಯೋಗಿಕ ವಿಷಯಗಳು. ಇತರ ವಿಷಯಗಳು ಎಲ್ಲ ಶಾಲೆಗಳಲ್ಲೂ ಪಠ್ಯಕ್ರಮದಲ್ಲಿ ಸೇರಿರುತ್ತವೆ. ವಿದ್ಯಾರ್ಥಿಗಳ ಅಭಿರುಚಿ ಆಸಕ್ತಿಗಳನ್ನೂ ಸ್ಥಳೀಯ ಅವಶ್ಯಕತೆಗಳನ್ನೂ ಮುಂದಿನ ಉದ್ಯೋಗಾವಕಾಶವನ್ನೂ ಗಮನದಲ್ಲಿರಿಸಿಕೊಂಡು ಸ್ಥಳೀಯ ಪ್ರಾಧಿಕಾರದವರು ಆಯಾ ವಿದ್ಯಾರ್ಥಿ ಆರಿಸಿಕೊಳ್ಳಬಹುದಾದ ಐಚ್ಛಿಕ ವಿಷಯವನ್ನು ನಿರ್ಧರಿಸುತ್ತಾರೆ. ಈ ವಯೋಮಾನದ ಮಕ್ಕಳಲ್ಲಿ ಸೇ. 99.9ರಷ್ಟು ಶಾಲೆಗೆ ಸೇರಿರುತ್ತಾರೆ. ಎಂದರೆ ಪ್ರಪಂಚದಲ್ಲೆಲ್ಲ ಕಡ್ಡಾಯ ಶಿಕ್ಷಣ 6-15ರ ವಯೋಮಾನದ ಮಕ್ಕಳಿಗೆ ಜಪಾನಿನಲ್ಲಿ ಅತ್ಯಂತ ಪೂರ್ಣವಾಗಿ ಆಚರಣೆಗೆ ಬಂದಿದೆ. ಅಮೆರಿಕದ ಜೂನಿಯರ್ ಹೈಸ್ಕೂಲಿನ ಮಾದರಿಯಲ್ಲಿ ವ್ಯವಸ್ಥೆಗೊಳಿಸಿರುವ ಈ ಶಾಲೆಗಳಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳ ಅಭಿರುಚಿಯ ಅನ್ವೇಷಣೆ ನಡೆಯುತ್ತದೆ.

	ಹಿರಿಯ ಪ್ರೌಢಶಾಲೆ: ಕಿರಿಯ ಪ್ರೌಢಶಾಲೆಯ ಮೂರು ವರ್ಷದ ಶಿಕ್ಷಣದ ಅನಂತರ ವಿದ್ಯಾರ್ಥಿಗಳು ಮೂರು ವರ್ಷದ ಹಿರಿಯ ಪ್ರೌಢಶಾಲೆಗೆ ಸೇರಬಹುದು. ಸ್ಥಳೀಯ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯೊಂದರ, ಹಾಗೂ ಕಿರಿಯ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯ ಶಿಕ್ಷಣಾಭಿವೃದ್ಧಿಯ ಆಧಾರದ ಮೇಲೆ ಅಲ್ಲಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು. ಪಠ್ಯಕ್ರಮದ ಆಧಾರದ ಮೇಲೆ ದೇಶದಲ್ಲಿ ನಾಲ್ಕು ಮುಖ್ಯ ವಿಧದ ಪ್ರೌಢಶಾಲೆಗಳನ್ನು ಗುರುತಿಸಬಹುದು; ಸಾಮಾನ್ಯ, ತಾಂತ್ರಿಕ, ವಾಣಿಜ್ಯ ಮತ್ತು ಗೃಹಕಾರ್ಯದ ಪ್ರೌಢಶಾಲೆಗಳು. ಜೊತೆಗೆ ಇತರ ವಿಧದವೂ ಉಂಟು. ಅವುಗಳಲ್ಲಿ ಕೆಲವು ಸಂಜೆಯ ಪಾಠಶಾಲೆಗಳು. ಅಲ್ಲಿನ ಶಿಕ್ಷಣ ನಾಲ್ಕು ಅಥವಾ ಹೆಚ್ಚು ವರ್ಷಗಳ ಕಾಲ ಹಿಡಿಯುತ್ತದೆ. ಮತ್ತೆ ಕೆಲವು ಅಂಚೆ ಶಿಕ್ಷಣವೀಯುವ ಪಾಠಶಾಲೆಗಳು; ಅಲ್ಲೂ ಶಿಕ್ಷಣ 4-5 ವರ್ಷ ಹಿಡಿಯುತ್ತದೆ ಪೂರ್ಣಕಾಲದ ಶಾಲೆಗಳಲ್ಲಿ ಓದಿದವರಿಗೆ ಕೊಡುವಂಥ ಅರ್ಹತಾಪತ್ರವನ್ನು ಭಾಗಶಃ ಮತ್ತು ಅಂಚೆಶಾಲೆಗಳಲ್ಲಿ ಶಿಕ್ಷಣ ಪಡೆದವರಿಗೂ ಕೊಡಲಾಗುವುದು. ಕಿರಿಯ ಪ್ರೌಢಶಾಲೆಯ ಶಿಕ್ಷಣ ಮುಗಿಸಿ 15-16ನೆಯ ವರ್ಷದಲ್ಲಿ ಕೆಲಸಕ್ಕೆ ಸೇರಿದವರಿಗಾಗಿ ಈ ಎರಡು ರೀತಿಯ ಪ್ರೌಢಶಾಲೆಗಳು ಏರ್ಪಟ್ಟಿವೆ. ರಾಷ್ಟ್ರದಲ್ಲಿ 1968ರಲ್ಲಿ ಒಟ್ಟು 4,817 ಹಿರಿಯ ಪ್ರೌಢಶಾಲೆಗಳೂ ಅಲ್ಲಿ 2,00,806 ಅಧ್ಯಾಪಕರೂ 43,37,905 ಮಂದಿ ವಿದ್ಯಾರ್ಥಿಗಳೂ ಇದ್ದರು. 15-17ರ ವಯೋಮಾನದ ಸೇ. 74.7ರಷ್ಟು ವಿದ್ಯಾರ್ಥಿಗಳು ಅಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಅವರಲ್ಲಿ ಸೇ. 88ರಷ್ಟು ಪೂರ್ಣಕಾಲದ ಪ್ರೌಢಶಾಲೆಗಳಲ್ಲೂ ಸೇ. 9ರಷ್ಟು ಭಾಗಶಃ ಪ್ರೌಢಶಾಲೆಗಳಲ್ಲೂ ಸೇ. 3ರಷ್ಟು ಅಂಚೆ ಪ್ರೌಢಶಾಲೆಗಳಲ್ಲೂ ಇದ್ದರು. ಸೇ. 32ರಷ್ಟು ಪ್ರೌಢಶಾಲೆಗಳು ಸಾಮಾನ್ಯ ಮತ್ತು ಔದ್ಯೋಗಿಕ ಪಠ್ಯಕ್ರಮಗಳೆರಡನ್ನೂ, ಸೇ. 30ರಷ್ಟು ಪ್ರೌಢಶಾಲೆಗಳು ವೃತ್ತಿ ಪಠ್ಯಕ್ರಮಗಳನ್ನೂ ಮಾತ್ರ ಹೊಂದಿದ್ದುವು. ಒಟ್ಟು ವಿದ್ಯಾರ್ಥಿಗಳಲ್ಲಿ ಸೇ. 75.9ರಷ್ಟು ಗಂಡಸರೂ ಸೇ. 73.4ರಷ್ಟು ಹೆಂಗಸರೂ ಇದ್ದರು.	

	ವಿಶಿಷ್ಟ ಪಾಠಶಾಲೆಗಳು: ದೇಶಾದ್ಯಂತ ಅಂಗವಿಕಲರಿಗೂ ಕಿವುಡ ಮತ್ತು ಕುರುಡರಿಗೂ ಮಂದಬುದ್ಧಿಯವರಿಗೂ 407 ವಿಶಿಷ್ಟ ಶಾಲೆಗಳಿದ್ದು, ಅಲ್ಲಿ ಅವರಿಗೆ ವಿಶೇಷ ವಿಧಾನಗಳ ಮೂಲಕ ಶಿಕ್ಷಣವೀಯುವುದರ ಜೊತೆಗೆ ಅವರವರಿಗೆ ಅನುಕೂಲಿಸುವ ಉದ್ಯೋಗವೊಂದರಲ್ಲಿ ತರಪೇತು ನೀಡುವ ವ್ಯವಸ್ಥೆಯೂ ಉಂಟು. 1968ರಲ್ಲಿ ಅವುಗಳಲ್ಲಿ ಒಟ್ಟು 50,183 ವಿದ್ಯಾರ್ಥಿಗಳಿದ್ದರು. ಅವರಿಗೆ ಶಿಕ್ಷಣವೀಯಲು ವಿಶೇಷ ಶಿಕ್ಷಣ ಪಡೆದ 11,429 ಮಂದಿ ಅಧ್ಯಾಪಕರಿದ್ದರು.
	ಉನ್ನತ ಶಿಕ್ಷಣ: ವಿಶ್ವವಿದ್ಯಾಲಯ, ಕಿರಿಯ (ಜೂನಿಯರ್)ಕಾಲೇಜುಗಳು, ತಾಂತ್ರಿಕ ಕಾಲೇಜುಗಳು-ಇವು ಜಪಾನಿನಲ್ಲಿ ಉನ್ನತ ಶಿಕ್ಷಣವೀಯುವ ಸಂಸ್ಥೆಗಳು. ವಿಶ್ವವಿದ್ಯಾನಿಲಯಗಳು ಮೂರು ವರ್ಷದ ಹಿರಿಯ ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದವರನ್ನು ಸೇರಿಸಿಕೊಂಡು ನಾಲ್ಕು ವರ್ಷದ ಪದವಿ ತರಗತಿಯ ಶಿಕ್ಷಣವೀಯುವುವು. ಒಟ್ಟು 379 ವಿಶ್ವವಿದ್ಯಾಲಯಗಳಿದ್ದು ಅಲ್ಲಿ 74,706 ಅಧ್ಯಾಪಕರೂ 13,54,827 ವಿದ್ಯಾರ್ಥಿಗಳೂ ಇರುವರು. ಎಂದರೆ, ಈ ವಿಶ್ವವಿದ್ಯಾಲಯವೊಂದೊಂದೂ ಒಂದೊಂದು ದೊಡ್ಡ ಕಾಲೇಜಿನಂತಿರುತ್ತದೆ. ಅವುಗಳಲ್ಲಿ ಅರ್ಧದಷ್ಟು ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ತರಗತಿಗಳಿವೆ. ಮಾಸ್ಟರ್ ಪದವಿ ಎರಡು ವರ್ಷದ್ದೂ ಡಾಕ್ಟರ್ ಪದವಿ 5 ವರ್ಷದ್ದೂ ಆಗಿರುತ್ತದೆ. ಕಿರಿಯ (ಜೂನಿಯರ್) ಕಾಲೇಜುಗಳು ಜಪಾನಿನ ವಿಶೇಷ ರೀತಿಯ ಉನ್ನತ ಶಿಕ್ಷಣ ಸಂಸ್ಥೆಗಳು. ಅವು ಹಿರಿಯ ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಎರಡು ಅಥವಾ ಮೂರು ವರ್ಷಗಳ ಶಿಕ್ಷಣ ನೀಡುವುವು. ಇಲ್ಲಿ ಪಡೆದ ಶಿಕ್ಷಣ ಪದವಿ ಪರೀಕ್ಷೆ ಪರಿಗಣನೆಗೆ ಬರುತ್ತದೆ. ಎಂದರೆ ಎಲ್ಲಿ ಎರಡು ವರ್ಷದ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿದವರು ವಿಶ್ವವಿದ್ಯಾಲಯದಲ್ಲಿ ಇನ್ನೆರಡು ವರ್ಷ ಮಾತ್ರ ಶಿಕ್ಷಣ ಪಡೆಯಬೇಕಾಗುತ್ತದೆ; ಇಲ್ಲಿ ಮೂರು ವರ್ಷ ಶಿಕ್ಷಣ ಪಡೆದವರು ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ಮಾತ್ರ ಶಿಕ್ಷಣ ಪಡೆದು ಪದವಿ ಪರೀಕ್ಷೆಗೆ ಕೂಡಬಹುದು. ಎಂದರೆ ಹಿರಿಯ ಪ್ರೌಢಶಾಲೆಯ ಅನಂತರದ ಉನ್ನತ ಶಿಕ್ಷಣದ 2-3 ತರಗತಿಗಳು ಕಿರಿಯ ಕಾಲೇಜು ಮತ್ತು ವಿಶ್ವವಿದ್ಯಾಲಯ-ಇವೆರಡರಿಂದಲೂ ಇರುತ್ತವೆ. 1968ರಲ್ಲಿ ಒಟ್ಟು 473 ಕಿರಿಯ ಕಾಲೇಜುಗಳೂ ಅವುಗಳಲ್ಲಿ 15,445 ಅಧ್ಯಾಪಕರೂ 2,63,362 ವಿದ್ಯಾರ್ಥಿಗಳೂ ಇದ್ದರು.

ತಾಂತ್ರಿಕ ಕಾಲೇಜುಗಳು 1962ರಿಂದ ಈಚೆಗೆ ಆರಂಭವಾದ ನೂತನ ಮಾದರಿಯ ಉನ್ನತ ಶಿಕ್ಷಣ ಸಂಸ್ಥೆಗಳು, ಕಿರಿಯ ಪ್ರೌಢಶಾಲೆಯ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಇವು 5 ವರ್ಷಗಳ ತಾಂತ್ರಿಕ ಶಿಕ್ಷಣವನ್ನೀಯುತ್ತವೆ. 12968ರಲ್ಲಿ ಒಟ್ಟು 60 ತಾಂತ್ರಿಕ ಕಾಲೇಜುಗಳೂ ಅವುಗಳಲ್ಲಿ 3,081 ಅಧ್ಯಾಪಕರೂ 41,637 ವಿದ್ಯಾರ್ಥಿಗಳೂ ಇದ್ದರು.
ಮೇಲಿನ ಮೂರು ರೀತಿಯ ಉನ್ನತ ಶಿಕ್ಷಣ ಸಂಸ್ಥೆಗಳೂ ತಮ್ಮದೇ ಆದ ಪ್ರವೇಶ ಪರೀಕ್ಷೆಯನ್ನು ನಡೆಸಿ ವಿದ್ಯಾರ್ಥಿಗಳನ್ನು ಆರಿಸಿಕೊಳ್ಳುವುವು. ಇತರ ದೇಶಗಳೊಡನೆ ಹೋಲಿಸಿದರೆ ಅಮೆರಿಕದ ಸಂಯುಕ್ತ ಸಂಸ್ಥಾನಗಳನ್ನುಳಿದರೆ, ಆ ವಯೋಮಾನದ ವಿದ್ಯಾರ್ಥಿಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಉನ್ನತ ಶಿಕ್ಷಣಕ್ಕೆ ಬರುತ್ತಾರೆ (ಸೇ. 15.7). ಎಲ್ಲ ರೀತಿಯ ಉನ್ನತ ಶಿಕ್ಷಣಕ್ಕಾಗಿ ಬರತಕ್ಕ ವಿದ್ಯಾರ್ಥಿಗಳನ್ನು ಒಟ್ಟಾರೆ ಪರಿಗಣಿಸಿದರೆ ಸೇ. 40ರಷ್ಟಿ ಮಹಿಳೆಯರು ಇರುವುದು ಕಂಡುಬರುತ್ತದೆ.
ಇತರ ವಿಧದ ಪಾಠಶಾಲೆಗಳು: ಮೇಲೆ ವಿವರಿಸಿದ ವಿಧಾಯಕ ರೀತಿಯ ಶಿಕ್ಷಣ ಸಂಸ್ಥೆಗಳ ಜೊತೆಗೆ ಜಪಾನಿನಲ್ಲಿ ಮಿಸಲೇನಿಯಸ್ ಪಾಠಶಾಲೆಗಳೆಂಬ ಖಾಸಗಿ ಸಂಸ್ಥೆಗಳು ಅಧಿಕ ಸಂಖ್ಯೆಯಲ್ಲಿ ಅಸ್ತಿತ್ವದಲ್ಲಿವೆ. ಅವು ಯುವಕಯುವತಿಯರಿಗೆ ಅಡಿಗೆ, ಹೊಲಿಗೆ, ಉಡುಪು ತಯಾರಿಕೆ, ಬೆರಳಚ್ಚು, ನಕ್ಷೆ ಬರೆಯುವುದು, ಅನ್ಯಭಾಷೆ, ಸ್ವತಶ್ಚಲಿ ಯಂತ್ರ ರಚನೆಯ ತರಪೇತಿ, ಎಲೆಕ್ಟ್ರಾನಿಕ್ಸ್, ಗಣಕ ಯಂತ್ರಗಳ ಕಾರ್ಯಾಚರಣೆ ಮುಂತಾದವುಗಳಲ್ಲಿ ಔದ್ಯೋಗಿಕ ಮತ್ತು ಪ್ರಾಯೋಗಿಕ ಶಿಕ್ಷಣವೀಯುತ್ತವೆ.

ವಯಸ್ಕರ ಶಿಕ್ಷಣ: ಶಾಲೆಯನ್ನು ಬಿಟ್ಟ ವಯಸ್ಕರಿಗೂ ಯುವಕರಿಗೂ ಸರ್ಕಾರ ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳೂ ವಿಧವಿಧವಾದ ಶಿಕ್ಷಣ ಸೌಲಭ್ಯವನ್ನು ಒದಗಿಸುತ್ತವೆ. ಸಾರ್ವಜನಿಕ ಪೌರಭವನಗಳು (ಸಿಟಿಜûನ್ಸ್ ಪಬ್ಲಿಕ್ ಹಾಲ್ಸ್), ಯುವ ಜನಾಲಯಗಳು (ಯೂತ್ ಹಾಸ್ಟೆಸ್), ವಸ್ತುಸಂಗ್ರಹಾಲಯ, ಗ್ರಂಥಾಲಯ, ದೈಹಿಕ ಶಿಕ್ಷಣ ಕೇಂದ್ರಗಳು-ಇವು ಅವುಗಳಲ್ಲಿ ಮುಖ್ಯವಾದವು. ಅಕ್ಷರಸ್ಥರ ಪ್ರಮಾಣ ಇಲ್ಲಿ ಅತಿ ಹೆಚ್ಚಾಗಿರುವುದರಿಂದ ವಯಸ್ಕರ ಶಿಕ್ಷಣ ಪೂರ್ಣವಾಗಿ ಸಮಾಜ ಶಿಕ್ಷಣದ ಸ್ವರೂಪವನ್ನು ತಾಳಿದೆ. ಜನತೆಯ ಬೌದ್ಧಿಕ ಮತ್ತು ಸಾಂಸ್ಕøತಿಕ ಜೀವನವನ್ನು ಉತ್ತಮಪಡಿಸಲು ಅವು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತವೆ. ಎಲ್ಲ ಮಟ್ಟದ ಜನತೆಗೂ ಅಲ್ಲಿನ ಕಾರ್ಯಕ್ರಮಗಳಲ್ಲಿ ಆಸಕ್ತಿಯುಂಟು. ಯುವಜನ ಕೇಂದ್ರಗಳು ಸಾಮೂಹಿಕವಾಗಿ ಜೀವಿಸಲು ಯುವಕರಿಗೆ ವಸತಿ ಸೌಲಭ್ಯವನ್ನೊದಗಿಸುತ್ತವೆ.

ಶಾಲೆಯ ವರ್ಷ ಮತ್ತು ವ್ಯಾಸಂಗಾವಧಿ: ಶಾಲೆಯ ವರ್ಷ ಜಪಾನಿನಲ್ಲಿ ಪ್ರತಿ ವರ್ಷ ಏಪ್ರಿಲ್ 1ನೆಯ ದಿನ ಆರಂಭವಾಗಿ ಮುಂದಿನ ವರ್ಷದ ಮಾರ್ಚಿ ಕೊನೆಯ ದಿನ ಮುಗಿಯುತ್ತದೆ. ಇದು ಅಲ್ಲಿನ ಆರ್ಥಿಕ ವರ್ಷದೊಡನೆ ಸರಿಯಾಗಿ ಏರ್ಪಟ್ಟಿದೆ. ಪ್ರಾಥಮಿಕ ಶಾಲೆಯಲ್ಲೂ ಕಿರಿಯ ಪ್ರೌಢಶಾಲೆಯಲ್ಲೂ ಶಾಲಾವರ್ಷವನ್ನು ಮೂರು ವ್ಯಾಸಂಗಾವಧಿಗಳನ್ನಾಗಿ (ಟರ್ಮ್) ವಿಂಗಡಿಸಿದೆ: ಏಪ್ರಿಲ್‍ನಿಂದ ಜುಲೈವರೆಗೆ ಮೊದಲ ಅವಧಿ; ಸೆಪ್ಟೆಂಬರ್‍ನಿಂದ ಡಿಸೆಂಬರ್‍ವರೆಗೆ ಎರಡನೆಯ ಅವಧಿ: ಜನವರಿಯಿಂದ ಮಾರ್ಚ್‍ವರೆಗೆ ಮೂರನೆಯ ಅವಧಿ. ಹಿರಿಯ ಪ್ರೌಢಶಾಲೆಗಳಲ್ಲಿ ಎರಡು ಅಥವಾ ಮೂರು ಅವಧಿಗಳಿದ್ದರೆ ವಿಶ್ವವಿದ್ಯಾಲಯಗಳೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳೂ ಎರಡೇ ಅವಧಿಗಳನ್ನಾಗಿ (ಸಿಮೆಸ್ಟರ್) ವಿಭಾಗಿಸಿಕೊಂಡಿರುತ್ತವೆ. ಬೇಸಗೆ, ಚಳಿಗಾಲ ಮತ್ತು ವಸಂತಕಾಲದ ದೀರ್ಘವಧಿ ರಜ ಕೊಡುತ್ತವೆ. ಬೇಸಗೆ ರಜದ ಆರಂಭ ಮತ್ತು ಮುಕ್ತಾಯಗಳಲ್ಲಿ ಬೇರೆ ಬೇರೆ ಹಂತದ ಶಾಲೆಗಳಲ್ಲೂ ಬೇರೆಬೇರೆ ಪ್ರದೇಶದ ಶಾಲೆಗಳಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಪ್ರಾಥಮಿಕ ಮತ್ತು ಕಿರಿಯ ಪ್ರೌಢಶಾಲೆಗಳಲ್ಲಿ ಅದು ಜುಲೈ ಅಂತ್ಯದಲ್ಲಿ ಆರಂಭವಾಗಿ ಆಗಸ್ಟ್ ಅಂತ್ಯಕ್ಕೆ ಮುಗಿಯುತ್ತದೆ. ಕೆಲವು ಗ್ರಾಮಾಂತರ ಶಾಲೆಗಳು ಬೇಸಾಯಕ್ಕೆ ಅನುಕೂಲಿಸಲೆಂದು ವಸಂತಕಾಲದಲ್ಲೂ ಶರತ್ಕಾಲದಲ್ಲೂ ರಜ ಕೊಡುವುವು; ಅವು ಬೇಸಗೆ ರಜಾ ಕಾಲದ ಅವಧಿಯನ್ನು ಕಡಿಮೆ ಮಾಡುವುವು.

ಪಠ್ಯಕ್ರಮ ಮತ್ತು ಅದರ ಪುನವ್ರ್ಯವಸ್ಥೆ: ಶಿಕ್ಷಣ ಸಚಿವಾಲಯ ರಾಷ್ಟ್ರದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೂ ಪಠ್ಯಕ್ರಮ ಮಟ್ಟವನ್ನು ಸ್ಥೂಲವಾಗಿ ನಿಷ್ಕರ್ಷಿಸಿ ಪ್ರತಿ ವಿಷಯದ ಉದ್ದೇಶ, ಗುರಿ, ಪ್ರತಿ ತರಗತಿಯಲ್ಲೂ ಬೋಧಿಸಬೇಕಾದ ಅಂಶಗಳು-ಇವನ್ನೆಲ್ಲ ಸೂಚಿಸುತ್ತದೆ. ಪ್ರತಿಯೊಂದು ಶಾಲೆಯೂ ಅಲ್ಲಿನ ಸಮಾಜ ಜೀವನ, ವಿದ್ಯಾರ್ಥಿಗಳ ಶಿಕ್ಷಣಾಭಿವೃದ್ಧಿ ಮತ್ತು ಅನುಭವಗಳ ಸ್ವರೂಪ-ಇವನ್ನು ಆಧಾರ ಮಾಡಿಕೊಂಡು ಸಚಿವಾಲಯ ನಿಷ್ಕರ್ಷಿಸಿರುವ ಪಠ್ಯಕ್ರಮದ ಅಚ್ಚುಕಟ್ಟಿನೊಳಗೆ ತನ್ನದೇ ಆದ ಪಠ್ಯಕ್ರಮವನ್ನು ವಿವರವಾಗಿ ರೂಪಿಸಿಕೊಳ್ಳುತ್ತದೆ. ಪ್ರಾಥಮಿಕ ಮತ್ತು ಕಿರಿಯ ಪ್ರೌಢಶಾಲೆಗಳಲ್ಲಿ ಪ್ರತಿ ತರಗತಿಗೂ ಬೋಧಿಸಬೇಕಾದ ವಿಷಯಗಳನ್ನು ಪ್ರತಿ ವಿಷಯಕ್ಕೂ ವಾರಕ್ಕೆ ಕೊಡಬೇಕಾದ ಪಾಠದ ಸಂಖ್ಯೆಯನ್ನೂ ಗೊತ್ತುಮಾಡುತ್ತದೆ; ಹಿರಿಯ ಪ್ರೌಢಶಾಲೆಯಲ್ಲಿ ಬೋಧಿಸಬೇಕಾದ ವಿಷಯವನ್ನೂ ಪ್ರತಿವಿಷಯದಲ್ಲೂ ಶಿಕ್ಷಣ ಮುಗಿಸಲು ವ್ಯಾಸಂಗ ಮಾಡಬೇಕಾದ ಘಟಕಗಳ (ಕ್ರೆಡಿಟ್) ಸಂಖ್ಯೆಯನ್ನು ಗೊತ್ತು ಮಾಡುತ್ತದೆ.

ಸಮಾಜ ಜೀವನದಲ್ಲಾಗುವ ಬದಲಾವಣೆಗೆ ಶಿಕ್ಷಣವನ್ನು ಹೊಂದಿಸಿಕೊಳ್ಳಲು ಅಗತ್ಯವೆನಿಸಿದಾಗ ಪಠ್ಯಕ್ರಮದಲ್ಲಿ ಸಚಿವಾಲಯ ಸೂಕ್ತವೆನಿಸುವ ಮಾರ್ಪಾಡುಗಳನ್ನು ಮಾಡುತ್ತದೆ. ಇತ್ತೀಚೆಗೆ ಅಲ್ಲಿನ ರಾಜಕೀಯ, ಆರ್ಥಿಕ, ಔದ್ಯೋಗಿಕ ಮತ್ತು ಸಾಂಸ್ಕøತಿಕ ಜೀವನದಲ್ಲಾದ ಬದಲಾವಣೆಗಳಿಗನುಗುಣವಾಗಿ ಪುನವ್ರ್ಯವಸ್ಥೆಗೊಳಿಸಿದ ಪಠ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹಂತಗಳಲ್ಲಿ ಆಚರಣೆಗೆ ತಂದಿದೆ.

ಆಡಳಿತ ವ್ಯವಸ್ಥೆ: ಜಪಾನಿನಲ್ಲಿ ಶಿಕ್ಷಣ ಸಚಿವಾಲಯ ಎಲ್ಲ ಮಟ್ಟದ ಶಿಕ್ಷಣಕ್ಕೂ ಕೇಂದ್ರ ಪ್ರಾಧಿಕಾರ. ಅದು ಎಲ್ಲ ಮಟ್ಟದ ಶಿಕ್ಷಣಾಭಿವೃದ್ಧಿಗೂ ಪ್ರಚಾರಕ್ಕೂ ಹೊಣೆ ಹೊತ್ತಿದೆ; ವಿಶ್ವವಿದ್ಯಾಲಯಗಳು, ಕಿರಿಯ ಕಾಲೇಜುಗಳು, ತಾಂತ್ರಿಕ ಕಾಲೇಜುಗಳು, ವಸ್ತುಸಂಗ್ರಹಾಲಯಗಳು, ಯುವಜನಾಲಯಗಳು, ಶಿಕ್ಷಣ ಸಂಶೋಧನ ಸಂಸ್ಥೆಗಳು ಮುಂತಾದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಳ್ಳುತ್ತದೆ; ಸಾರ್ವತ್ರಿಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಿ ನಡೆಸಿಕೊಂಡು ಬರುವ ಜಿಲ್ಲೆಗಳ ಮತ್ತು ಪೌರಸಭೆಗಳ ಸ್ಥಳೀಯ ಪ್ರಾಧಿಕಾರಗಳಿಗೆ ಅಗತ್ಯವಾಗುವ ಮಾರ್ಗದರ್ಶನವನ್ನೂ ಸಲಹೆಯನ್ನೂ ದೊರಕಿಸುವುದಲ್ಲದೆ ಅಗತ್ಯವಾದ ಹಣಕಾಸನ್ನೂ ಅನುದಾನವಾಗಿ ಒದಗಿಸುತ್ತದೆ; ಲೋಪ ದೋಷಗಳು ಕಂಡುಬಂದರೆ ಸಂಬಂಧಿಸಿದ ಅಂಶಗಳಲ್ಲಿ ವಿಚಾರಣೆ ನಡೆಸಿ ಅಗತ್ಯವೆನಿಸುವ ತಿದ್ದುಪಾಟುಗಳನ್ನು ಸಲಹೆ ಮಾಡುತ್ತದೆ. ರಾಷ್ಟ್ರದ 46 ಜಿಲ್ಲೆಗಳಲ್ಲೂ (ಪ್ರಿಫೆಕ್ಟರ್) 3,000 ಪೌರಸಭೆಗಳಲ್ಲೂ ಒಂದೊಂದು ಶಿಕ್ಷಣ ಮಂಡಲಿಯನ್ನು ಏರ್ಪಡಿಸಿದೆ. ಆಯಾ ಪ್ರದೇಶಕ್ಕೆ ಆ ಮಂಡಲಿ ಸ್ಥಳೀಯ ಪ್ರಾಧಿಕಾರವಾಗಿ ಕೆಲಸ ಮಾಡುತ್ತದೆ. ಜಿಲ್ಲೆಯ ಶಿಕ್ಷಣ ಮಂಡಲಿಯಲ್ಲಿ 5 ಮಂದಿ ಸದಸ್ಯರಿದ್ದು ನಾಲ್ಕು ವರ್ಷಗಳ ಕಾಲಾವಧಿಗೆ ಅವರನ್ನು ಅಲ್ಲಿನ ರಾಜ್ಯಪಾಲರು ನೇಮಕ ಮಾಡುತ್ತಾರೆ. ಆ ಮಂಡಲಿ ತನ್ನ ಭೌಗೋಳಿಕ ವ್ಯಾಪ್ತಿಯ ಹಿರಿಯ ಪ್ರೌಢಶಾಲೆಗಳ, ವಿಶಿಷ್ಟ ಪಾಠಶಾಲೆಗಳ ಹಾಗೂ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯಗಳ ಆಡಳಿತವನ್ನು ನೋಡಿಕೊಳ್ಳುತ್ತದೆ. ತನ್ನ ವ್ಯಾಪ್ತಿಯಲ್ಲಿರುವ ಪೌರಸಭೆಯ ಶಿಕ್ಷಣ ಮಂಡಲಿಗಳಿಗೆ ಮಾರ್ಗದರ್ಶನವನ್ನೂ ಸಲಹೆಯನ್ನೂ ನೀಡುತ್ತದೆ. ಜೂನಿಯರ್ ಕಾಲೇಜುಗಳ ಮತ್ತು ವಿಶ್ವವಿದ್ಯಾಲಯಗಳ ಮೇಲ್ವಿಚಾರಣೆಯನ್ನು ರಾಜ್ಯಪಾಲರೇ ನಡೆಸುವರು.

ಪೌರಸಭೆಯ ಅನುಮತಿ ಪಡೆದು ಪೌರಸಭಾಧ್ಯಕ್ಷರು ಅಲ್ಲಿ ಶಿಕ್ಷಣಮಂಡಲಿಯ ಸದಸ್ಯರನ್ನು ನೇಮಿಸುವರು. ಮಂಡಲಿಯಲ್ಲಿ ಮೂರರಿಂದ ಐದು ಮಂದಿ ಸದಸ್ಯರಿದ್ದು ಅವರ ಅಧಿಕಾರಾವಧಿ ನಾಲ್ಕು ವರ್ಷಗಳ ಕಾಲದ್ದಿರುತ್ತದೆ. ಈ ಮಂಡಲಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಾಥಮಿಕ ಮತ್ತು ಕಿರಿಯ ಪ್ರೌಢಶಾಲೆಗಳನ್ನು ನಡೆಸಿಕೊಂಡು ಬರುವುದರ ಜೊತೆಗೆ ವಯಸ್ಕರಿಗೂ ಯುವಜನಕ್ಕೂ ವಿವಿಧ ರೀತಿಯ ಶಿಕ್ಷಣಸೌಲಭ್ಯಗಳನ್ನು ಒದಗಿಸುತ್ತವೆ.

ಕೇಂದ್ರ ಸರ್ಕಾರ ಜಿಲ್ಲೆಗಳಿಗೂ ಪೌರಸಭೆಗಳಿಗೂ ನೀಡುವ ಸಹಾಯಧನದ ಬಾಬುಗಳನ್ನೂ ಅದರ ಪ್ರಮಾಣವನ್ನೂ ಮುಂದಿನ ಪಟ್ಟಿಯಲ್ಲಿ ಸೂಚಿಸಿದೆ.

ಸಹಾಯಧನದ ಬಾಬುಗಳು
ಸಹಾಯಧನ ಪಡೆಯುವ ಪ್ರಾಧಿಕಾರ
ಸಹಾಯಧನದ ಪ್ರಮಾಣ

1 ಸಾರ್ವಜನಿಕ ಪ್ರಾಥಮಿಕ ಮತ್ತು ಕಿರಿಯ ಪಾಠಶಾಲೆಗಳ ಅಧ್ಯಾಪಕರ ಸಂಬಳ	
ಜಿಲ್ಲಾ ಪ್ರಾಧಿಕಾರ
50%

2 ಸಾರ್ವಜನಿಕ ಪ್ರಾಥಮಿಕ ಮತ್ತು ಕಿರಿಯ ಪ್ರೌಢಶಾಲೆಗಳ ಬೋಧನೆಯ ಉಪಕರಣಗಳು ಮತ್ತು ಸಾಮಾನುಗಳು
ಪೌರಸಭೆಗಳು
50%

3 ಸಾರ್ವಜನಿಕ ಪ್ರಾಥಮಿಕ ಮತ್ತು ಕಿರಿಯ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಸಹಾಯ	
ಪೌರಸಭೆಗಳು
50%

4 ಸಾರ್ವಜನಿಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿಜ್ಞಾನೋಪಕರಣಗಳು
ಜಿಲ್ಲಾ ಪ್ರಾಧಿಕಾರ ಮತ್ತು ಪೌರಸಭೆಗಳು
50%

5 ಸಾರ್ವಜನಿಕ ಪ್ರೌಢಶಾಲೆಗಳಿಗೆ ಔದ್ಯೋಗಿಕ ಶಿಕ್ಷಣದ ಸಾಧನಗಳು
ಜಿಲ್ಲಾ ಪ್ರಾಧಿಕಾರ ಮತ್ತು ಪೌರಸಭೆಗಳು
33%

6 ಸಾರ್ವಜನಿಕ ಪ್ರಾಥಮಿಕ ಮತ್ತು ಕಿರಿಯ ಪ್ರೌಢಶಾಲೆಗಳ ಕಟ್ಟಡಗಳ ನಿರ್ಮಾಣ
ಪೌರಸಭೆಗಳು
50%

7 ಸಾರ್ವಜನಿಕ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹಳೆಯ ಕಟ್ಟಡಗಳ ಪುನರ್ನಿಮಾಣ
ಪೌರಸಭೆಗಳು ಮತ್ತು ಜಿಲ್ಲಾ ಪ್ರಾಧಿಕಾರಗಳು
33%

												
ಶಿಕ್ಷಣದ ಹಣಕಾಸು: ಶಿಕ್ಷಣ ಸೇವಾ ವ್ಯವಸ್ಥೆಗೆ ಅಗತ್ಯವಾಗುವ ವೆಚ್ಚವನ್ನು ಕೇಂದ್ರ ಸರ್ಕಾರವೂ ಜಿಲ್ಲಾ ಮತ್ತು ಪೌರಸಭೆಗಳೂ ಹಂಚಿಕೊಳ್ಳುತ್ತವೆ. ಮೇಲಿನ ಮೂರು ಮಟ್ಟದ ಪ್ರಾಧಿಕಾರಗಳೂ ತಾವು ಸಂಗ್ರಹಿಸುವ ತೆರಿಗೆ ಮತ್ತು ಇತರ ಆದಾಯಗಳಿಂದ ಧನವೊದಗಿಸುತ್ತವೆ. ಕೇಂದ್ರ ಸರ್ಕಾರ ಜಿಲ್ಲೆಗಳಿಗೂ ಪೌರಸಭೆಗಳಿಗೂ ಸಹಾಯಧನದ ರೂಪದಲ್ಲಿ ಹಣ ಒದಗಿಸುತ್ತದೆ.

1967-68ನೆಯ ವರ್ಷದಲ್ಲಿ ಜಪಾನಿನಲ್ಲಿ ಶಿಕ್ಷಣದ ಒಟ್ಟು ವೆಚ್ಚ ರಾಷ್ಟ್ರೀಯ ಆದಾಯದ ಶೇ. 5ರಷ್ಟಾಗಿತ್ತು: ಹಾಗೂ ಸರ್ಕಾರದ ಒಟ್ಟು ವೆಚ್ಚದ ಶೇ. 21 ರಷ್ಟಾಗಿತ್ತು. ಇಡೀ ವೆಚ್ಚದ ಅರ್ಧ ಭಾಗವನ್ನು ಕೇಂದ್ರ ಸರ್ಕಾರ ಒದಗಿಸಿತ್ತು.

ಸಾರ್ವಜನಿಕ ಪ್ರಾಥಮಿಕ ಮತ್ತು ಕಿರಿಯ ಪ್ರೌಢಶಾಲೆಗಳನ್ನು ಪೌರಸಭೆಗಳು ನಡೆಸುತ್ತಿದ್ದರೂ ಅಧ್ಯಾಪಕರ ಸಂಬಳಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರವೂ ಜಿಲ್ಲಾ ಸರ್ಕಾರಗಳೂ ಹಂಚಿಕೊಳ್ಳುತ್ತವೆ.			(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ